ಕಾಸರಗೋಡು: ಕಣ್ಣೂರು, ಇರಿಕ್ಕೂರು, ಸಿದ್ದಿಕ್‌ನಗರದ ನಿವಾಸಿ ಕುಂಞಾಮಿನ (60)ರನ್ನು ಅತಿ ದಾರುಣವಾಗಿ ಕೊಲೆಗೈದ ಪ್ರಕರಣದ ಆರೋಪಿ 10 ವರ್ಷದ ಬಳಿಕ ಸೆರೆ ಯಾಗಿದ್ದಾನೆ. ದೆಹಲಿ ನಿವಾಸಿ ಅಬ್ಬಾಸ್ ಅಲಿ (31)ನನ್ನು ಕಾಸರಗೋಡು- ಕಣ್ಣೂರು ಕ್ರೈಮ್ ಬ್ರಾಂಚ್ ಎಸ್‌ಪಿ ಕೆ.ವಿ. ವೇಣುಗೋಪಾಲ್‌ರ ನೇತೃತ್ವದಲ್ಲಿರುವ ತನಿಖಾ ತಂಡ ಸಮರ್ಥ ರೀತಿಯಲ್ಲಿ ದೆಹಲಿ ಪ್ರೇಮ್‌ನಗರದಿಂದ ಸೆರೆ ಹಿಡಿದಿದೆ.
ಇಂದು ಮುಂಜಾನೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ಆರೋಪಿಯನ್ನು ಸಮಗ್ರ ತನಿಖೆಗಾಗಿ ವಿಚಾರಿಸಲಾಗುತ್ತಿದೆ. ತನಿಖಾ ತಂಡದಲ್ಲಿ ಡಿವೈಎಸ್‌ಪಿ ಪಿ. ನಾರಾಯಣನ್, ಇನ್ಸ್‌ಪೆಕ್ಟರ್ ಶ್ರೀಜಿತ್ ಕೊಡೇರಿ, ಎಸ್‌ಐ ಅಬ್ದುಲ್ ರೌಫ್ ಎಂಬಿವರಿದ್ದಾರೆ.
೨೦೧೬ ಎಪ್ರಿಲ್ ೩೦ರಂದು ಇರಿಕ್ಕೂರ್, ಸಿದ್ದಿಕ್ ನಗರದ ದಿ| ಮೊಯ್ದುರ ಪತ್ನಿ ಕುಂಞಾಮಿನ ಕೊಲೆಗೀಡಾಗಿದ್ದರು. ನೆರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದ ಅಬ್ಬಾಸ್ ಅಲಿ, ಸಹೋದರಿ ಸಕೀನ ಫಾತಿಮ (32), ತಾಯಿ ಫರ್ವೀನ ಸಾನು (55) ಕೊಲೆ ಪ್ರಕರಣದ ಬಳಿಕ ದೆಹಲಿ ನಿವಾಸಿಗಳಾದ ಇವರು ಕುಂಞಾಮಿನರ ಮನೆಯಲ್ಲಿ ಕಳವು ನಡೆಸಿ ಪರಾರಿಯಾಗಿದ್ದರು. ಲೋಕಲ್ ಪೊಲೀಸರು ಪ್ರಥಮವಾಗಿ ಈ ಪ್ರಕರಣವನ್ನು ತನಿಖೆ ನಡೆಸಿದ್ದರೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಕ್ರೈಮ್ ಬ್ರಾಂಚ್‌ಗೆ ಒಪ್ಪಿಸಲಾಗಿತ್ತು. ಪಿ. ಬಾಲಕೃಷ್ಣನ್ ನಾಯರ್ ಕ್ರೈಮ್ ಬ್ರಾಂಚ್ ಎಸ್‌ಪಿಯಾಗಿರುವಾಗ ಫರ್ವೀನ್ ಬಾನು ಹಾಗೂ ಪುತ್ರಿ ಸಕೀನ ಫಾತಿಮರನ್ನು 2026 ಮಾರ್ಚ್ 14ರಂದು ಸೆರೆ ಹಿಡಿಯಲಾಗಿತ್ತು. ಹೈದರಾಬಾದ್‌ನ ರಹಸ್ಯ ಕೇಂದ್ರದಿಂದ ಇವರನ್ನು ಬಂಧಿಸಲಾಗಿತ್ತು. ತಿಂಗಳುಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಇವರಿಬ್ಬರನ್ನು ಪಳ್ಳಿಕೆರೆ ನಿವಾಸಿಗಳಾದ ರಾಜೇಂದ್ರನ್, ಜಲೀಲ್ ಎಂಬಿವರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದರು. ಇವರಿಗೆ ಆರೋಪಿಗಳೊಂದಿಗಿರುವ ಸಂಬಂಧವೇನು ಎಂಬ ಬಗ್ಗೆ ತನಿಖೆ ನಡೆಸಲು ಇವರಿಬ್ಬರನ್ನು ಕೂಡಾ ಕಸ್ಟಡಿಗೆ ತೆಗೆಯಲು ತನಿಖಾ ತಂಡ ಮುಂದಾಗಿದೆ.
ಪ್ರಧಾನ ಸೂತ್ರಧಾರಿಯಾದ ಅಬ್ಬಾಸ್ ಅಲಿಯನ್ನು ರಹಸ್ಯ ನಡೆಯ ಮೂಲಕ ತನಿಖಾ ತಂಡ ಸೆರೆ ಹಿಡಿ ದಿದೆ. ದೆಹಲಿಯಲ್ಲಿ ತಲೆ ಮರೆಸಿ ಕೊಂಡು ಜೀವಿಸುತ್ತಿದ್ದ ಆರೋಪಿ ವಿವಾಹಿತನಾಗಿದ್ದು, ಪೂಜ ಎಂಬ ಪ್ರಿಯತಮೆಯೂ ಈತನಿಗಿದ್ದಾಳೆ ನ್ನಲಾಗಿದೆ. ಪ್ರಿಯತಮೆಯ ಜೊತೆ ಈಗ ದೆಹಲಿಯಲ್ಲಿ ವಾಸಿಸುತ್ತಿದ್ದನು. ಈತ ಫೋನ್ ಉಪಯೋಗಿಸುವುದಿಲ್ಲ. ಆದರೆ ಪೂಜ ಈ ಮೊದಲು ಬಂಧನಕ್ಕೀಡಾಗಿ ಜಾಮೀನಿನಲ್ಲಿ ಹೊರ ಬಂದ ಸಕೀನ ಬಾನುವನ್ನು ಸಂಪರ್ಕಿಸುತ್ತಿದ್ದಳೆನ್ನಲಾಗಿದೆ. ಇದನ್ನು ಆಧಾರವಾಗಿಟ್ಟು ನಡೆಸಿದ ತನಿಖೆಯಲ್ಲಿ ಕೊನೆಗೂ ಅಬ್ಬಾಸ್ ಅಲಿ ಸೆರೆಗೀಡಾಗಿದ್ದಾನೆ. ಈತನ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






