ಮಂಜೇಶ್ವರ: ಗಾಣಿಗ ಸಮಾಜದ ಬಹುಕಾಲದ ಬೇಡಿಕೆಯಾದ ಗಾಣಿಗ ಜಾತಿ ಪ್ರಮಾಣಪತ್ರ ಇನ್ನು ಮುಂದೆ ಒಬಿಸಿ ಕೆಟಗರಿಯಲ್ಲಿ ದೊರಕುವುದು. ಇದರ ಪ್ರಯೋಜನವನ್ನು ಸಮಾಜಬಾಂಧವರು ಪಡೆದುಕೊಳ್ಳಬೇಕೆಂದು ಹರಿಶ್ಚಂದ್ರ ಮಂಜೇಶ್ವರ ತಿಳಿಸಿದ್ದಾರೆ. ಇದುವರೆಗೆ ಇನ್ನಿತರ ಹಿಂದುಳಿದ ಜಾತಿ ಪಟ್ಟಿಯಲ್ಲಿ ಗಣಿಕ ಎಂಬುದಾಗಿ ನಮೂದಿಸಲ್ಪಟ್ಟಿದ್ದುದರಿಂದ ಗಾಣಿಗ ಸಮುದಾಯ ಒಬಿಸಿ ವಿಭಾಗದಿಂದ ವಂಚಿತಗೊಂಡು ಸರಕಾರದಿಂದ ಸಿಗಬೇಕಾದ ಸವಲತ್ತುಗಳು ನಿಷೇಧಿಸಲ್ಪಟ್ಟಿತ್ತು. ಈ ಬಗ್ಗೆ ಗಣಿಕ ಶಬ್ದದ ಬದಲು ಗಾಣಿಗ ಎಂಬುದಾಗಿ ಗಾಣಿಗ ಜಾತಿಯ ಸೇರ್ಪಡೆಯ ಕುರಿತು ಹಲವು ಕಾಲದಿಂದ ನಿರಂತರ ಸಂಬಂಧಪಟ್ಟ ಅಧಿಕಾರಿ ಹಾಗೂ ಇಲಾಖೆಗಳಲ್ಲಿ ಸಮುದಾಯದ ನಾಯಕರು ಮತ್ತು ರಾಜಕೀಯ ನೇತಾರರು ಹೋರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಿರ್ತಾಡ್ಸ್ ಸಂಸ್ಥೆ ಮೂಲಕ ಗಾಣಿಗ ಸಮುದಾಯದ ಕುರಿತು ಸಂಶೋಧನೆ ನಡೆಸಿ ರಾಜ್ಯ ಸರಕಾರ ಹಿಂದುಳಿದ ವಿಭಾಗದ ಇಲಾಖೆಗೆ ಸಮರ್ಪಿಸಿ ಪಿಣರಾಯಿ ವಿಜಯನ್ ಸರಕಾರದ ಕೊನೆಯ ಅವಧಿಯ ಸಚಿವ ಸಂಪುಟದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಒಳಪಡಿಸಿತ್ತು. ಪ್ರಸ್ತುತ ವಿ.ಡಿ. ಸತೀಶನ್ ಸರಕಾರದ ಆರಂಭದ ಅವಧಿಯಲ್ಲಿ ರಾಜ್ಯದ ವಾಣಿಯ ಸಮುದಾಯದ ಉನ್ನತ ನಾಯಕರಾದ ಜಗದೀರಾಜನ್ ಹಾಗೂ ನ್ಯಾಯವಾದಿ ಶಾಜಿ ವಾಣಿಯನ್ ಅವರ ಮಧ್ಯಪ್ರವೇಶದಿಂದ ಶೀಘ್ರವೇ ರಾಜ್ಯಪಾಲರ ಅಂಕಿತ ಪಡೆದು ಕೇರಳ ಸರಕಾರದ ಜಿ.ಒ.(ಪಿ) ನಂಬ್ರ ೧೭/೨೦೨೬/ಪಿ/ಎ.ಆರ್.ಡಿ ೨೬/೦೯/೨೦೨೬ ದಿನಾಂಕದ ಎಕ್ಸ್ಟ್ರಾ ಆರ್ಡಿನರಿ ಗಜೆಟ್ ಪಬ್ಲಿಕೇಶನ್ ನಡೆಸಿ ಗಾಣಿಗ ಜಾತಿಯನ್ನು ಕೇರಳ ಸರಕಾರದ ಒಬಿಸಿ ಯಾದಿಯಲ್ಲಿ ಸೇರಿಸಲಾಗಿದೆ.
ಈ ಸಂಬಂಧ ಜಿಲ್ಲೆಯ ಗಾಣಿಗ ಸಮಾಜದ ಪರವಾಗಿ ಕಾರ್ಯಾಚರಿಸಿದ ಕಿರ್ತಾಡ್ಸ್ ಸಂಸ್ಥೆಗೆ ಹಾಗೂ ರಾಜಕೀಯ ನಾಯಕರಿಗೆ, ಕೇರಳ ಸರಕಾರ, ರಾಜಪಾಲರಿಗೆ ವಾಣಿಯ ಸಮುದಾಯದ ರಾಜ್ಯ ಅಧ್ಯಕ್ಷ ಜಗದೀರಾಜನ್, ನ್ಯಾಯವಾದಿ ಪಯ್ಯನ್ನೂರು ಶಾಜಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹರಿಶ್ಚಂದ್ರ ಮಂಜೇಶ್ವರ ತಿಳಿಸಿದ್ದಾರೆ. ಇನ್ನು ಕೇರಳದಲ್ಲಿ ಗಾಣಿಗ ಜಾತಿ ಪ್ರಮಾಣಪತ್ರ ಕೆಲವೇ ದಿನಗಳಲ್ಲಿ ಆನ್ಲೈನ್ ಮೂಲಕ ವಿಲ್ಲೇಜ್ ಆಫೀಸರಿಗೆ ಅರ್ಜಿ ಸಲ್ಲಿಸಿದರೆ ಒಬಿಸಿ ಕೆಟಗರಿಯಲ್ಲಿ ದೊರಕುವುದೆಂದು ಹರಿಶ್ಚಂದ್ರ ಮಂಜೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






