ಬುಲ್ಲೆಟ್‌ನಲ್ಲಿ ಎಂಡಿಎಂಎ ಸಾಗಾಟ: ಇಬ್ಬರು ಸೆರೆ : ಓರ್ವ ಜಿಲ್ಲೆಯ ಮಾದಕ ಸಾಗಾಟದ ಪ್ರಧಾನ ಕೊಂಡಿ

ಕಾಸರಗೋಡು: ಆಪರೇಶನ್ ತೂಫಾನ್‌ನಂಗವಾಗಿ ಚಂದೇರ ಪೊಲೀಸರು ತೃಕರಿಪುರದಲ್ಲಿ ನಡೆಸಿದ ದಾಳಿಯಲ್ಲಿ 1.20 ಗ್ರಾಂ ಎಂಡಿಎಂಎ ಸಹಿತ ಇಬ್ಬರು ಯುವಕರನ್ನು ಸೆರೆ ಹಿಡಿದಿದ್ದಾರೆ. ಮಾಡಕ್ಕಲ್ ನಿವಾಸಿ ಎಂ.ಕೆ. ಮುನೀರ್ (39), ಪಯ್ಯನ್ನೂರು ಕವ್ವಾಯಿ ನಿವಾಸಿ ಮೊಹಮ್ಮದ್ ಸಾಜಿದ್ (೩೫) ಎಂಬಿವರು ಸೆರೆಯಾದವರು. ಎಸ್‌ಐ ಎಂ. ಅಜ್ಮಲ್‌ನ ನೇತೃತ್ವದಲ್ಲಿ ನಿನ್ನೆ ರಾತ್ರಿ  10 ಗಂಟೆ ವೇಳೆ ನಡೆಸಿದ ವಾಹನ ತಪಾಸಣೆಯಲ್ಲಿ ಇವರು ಸೆರೆಯಾಗಿದ್ದಾರೆ. ತೃಕರಿಪುರ ಶಾಬೋ ಶೆಟ್ಟಿ ರಸ್ತೆ ಜಂಕ್ಷನ್‌ನಲ್ಲಿ ಬುಲ್ಲೆಟ್‌ನಲ್ಲಿ ಸಂಚರಿಸುತ್ತಿದ್ದಾಗ ಆರೋಪಿಗಳು ಪೊಲೀಸರನ್ನು ಕಂಡು ಹಿಂತಿರುಗಿ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಇವರನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಬಳಿಕ ನಡೆಸಿದ ದೇಹ ತಪಾಸಣೆಯಲ್ಲಿ ಮುನೀರ್‌ನ ಪ್ಯಾಂಟ್‌ನ ಜೇಬಿನಿಂದ ಎಂಡಿಎಂಎ ಪತ್ತೆಹಚ್ಚಲಾಗಿದೆ. 1300 ರೂ. ವಶಪಡಿಸಲಾಗಿದೆ.

ಸ್ವಂತ ಉಪಯೋಗಕ್ಕೂ, ಮಾರಾಟಕ್ಕೂ ಎಂಡಿಎಂಎ ತಂದಿರುವುದಾಗಿ ಆರೋಪಿಗಳು ಪೊಲೀಸರಲ್ಲಿ ತಿಳಿಸಿದ್ದಾರೆ. ಸೆರೆಯಾದ ಮುನೀರ್‌ಗೆ ತಳಿಪರಂಬದ ಎಂಡಿಎಂಎ ಪ್ರಕರಣದಲ್ಲೂ ಸಂಬಂಧವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದು ಆರೋಪಿಗಳು ಉಪಯೋಗಿಸಿದ ವಾಹನ ಮುನೀರ್‌ನದ್ದಾಗಿತ್ತು. ಜಿಲ್ಲೆಯಲ್ಲಿ ವ್ಯಾಪಕ ವಾಗಿ ಮಾದಕ ಪದಾರ್ಥ ಮಾರಾಟ ಮಾಡುವ ತಂಡದ ಕೊಂಡಿಯಾಗಿದ್ದಾನೆ ಮುನೀರ್ ಎಂದು ಪೊಲೀಸರು ತಿಳಿಸಿದ್ದಾರೆ. ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಪ್ರಬೇಶ್ ಕುಮಾರ್, ರಂಜಿತ್ ಮುತ್ತೇಡತ್, ಸುನಿಲ್ ಕುಮಾರ್, ನರೇಂದ್ರನ್ ದಾಳಿಗೆ ನೇತೃತ್ವ ವಹಿಸಿದ್ದರು.

RELATED NEWS

You cannot copy contents of this page