ಕಾಸರಗೋಡು: ರಾಜ್ಯ ಸರಕಾರದ 1೦೦ ದಿನಗಳ ಕ್ರಿಯಾ ಯೋಜನೆ ಕಾರ್ಯಕ್ರಮದಂತೆ ಜಿಲ್ಲೆಯ ಭೂರಹಿತರಾದ 289 ಕುಟುಂಬಗಳಿಗೆ ಲ್ಯಾಂಡ್ ಟ್ರಿಬ್ಯೂನಲ್ ಭೂಹಕ್ಕುಪತ್ರಗಳು ಹಾಗೂ ಎರಡು ಮುನಿಸಿಪಲ್ ಭೂಹಕ್ಕುಪತ್ರ ಸೇರಿದಂತೆ ಒಟ್ಟು 289 ಭೂಹಕ್ಕುಪತ್ರಗಳನ್ನು ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ನಿನ್ನೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ಭೂರಹಿತರಾದ ಕುಟುಂಬಗಳನ್ನು ಗುರುತಿಸಿ ಅವರಿಗೆ ಭೂಹಕ್ಕು ಖಾತರಿಪಡಿಸಲು ರಾಜ್ಯ ಸರಕಾರ ಕಟಿಬದ್ಧವಾಗಿದೆ. ಇದು ಸರಕಾರದ ಅತೀ ದೊಡ್ಡ ಹೊಣೆಗಾರಿಕೆಗಳಲ್ಲೊಂ ದಾಗಿದೆ. ಸ್ವಂತವಾಗಿ ನಿವೇಶನವಿಲ್ಲದವರು ಮನೆ ನಿರ್ಮಿಸಿ ನೀಡುವಂತೆ ಕೋರಿ ಸರಕಾರಕ್ಕೆ ಸಲ್ಲಿಸುವ ಅರ್ಜಿಗಳ ಪೈಕಿ ಅರ್ಹರಾದವರಿಗೆ ಸ್ಥಳ ಮತ್ತು ಮನೆ ನಿರ್ಮಿಸಿಕೊಡುವುದು ಸರಕಾರದ ನಿಲುವಾಗಿದೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗರಿಷ್ಠ ಪ್ರಯತ್ನ ಸರಕಾರ ನಡೆಸುತ್ತಿದೆಯೆಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಎಕೆಎಂ ಅಶ್ರಫ್, ಕೆ. ನೀಲಕಂಠನ್, ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್, ಎಡಿಎಂ ಪಿ. ಉದಯ ಕುಮಾರ್, ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್, ಆರ್‌ಡಿಒಗಳಾದ ಎಂ.ಎಸ್. ವಿಜು ಕುಮಾರ್, ಪಿ. ಸುಧೀಶ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.




