ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ದಾರುಣ ಘಟನೆ: ತೆಂಗಿನ ಮರ ಮೈಮೇಲೆ ಬಿದ್ದು ಪೆರ್ವಾಡ್  ಜುಮಾ ಮಸೀದಿ ಅಧ್ಯಕ್ಷ ಮೃತ್ಯು

ಕುಂಬಳೆ: ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ತೆಂಗಿನಮರ ತುಂಡಾಗಿ ಮೈ ಮೇಲೆ ಬಿದ್ದು ಮಸೀದಿ ಅಧ್ಯಕ್ಷ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರ್ವಾಡ್ ಜುಮಾ ಮಸೀದಿ ಸಮಿತಿ ಅಧ್ಯಕ್ಷರೂ, ಮೀನುಕಾರ್ಮಿಕನಾದ ಪೆರ್ವಾಡ್‌ನ ಅಬ್ದುಲ್ಲ (65) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ 8.30ರ ವೇಳೆ ಪೆರ್ವಾಡ್ ಪಿ.ಎಸ್ ಗ್ರೌಂಡ್‌ನ ಬಳಿ ದುರ್ಘಟನೆ ಸಂಭವಿಸಿದೆ. ಅಬ್ದುಲ್ಲ ಸ್ನೇಹಿತರಾದ ಇಬ್ರಾಹಿಂ ಹಾಗೂ ಹಸೈನಾರ್‌ರೊಂದಿಗೆ ಪೆರ್ವಾಡ್ ಪಿ.ಎಸ್. ಗ್ರೌಂಡ್‌ನ ಬಳಿಯ ಕಡಪ್ಪುರದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ತೆಂಗಿನಮರ ಮುರಿದು ಅಬ್ದುಲ್ಲರ ಮೈಮೇಲೆ ಬಿದ್ದಿದೆ. ಜತೆಗಿದ್ದವರು ದೂರಕ್ಕೆ ಸರಿದುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.

ಗಂಭೀರಗಾಯಗೊಂಡ ಅಬ್ದುಲ್ಲರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಬ್ದುಲ್ಲರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮೃತರು ಪತ್ನಿ ಸಕೀನ, ಮಕ್ಕಳಾದ ಹನೀಫ, ಶಂಸು, ಅಮೀರ್, ಸೈನಬ, ಮಿಸ್ರಿಯ, ಖದೀಜ, ಅಳಿಯ-ಸೊಸೆಯಂದಿರಾದ ಸತ್ತಾರ್, ತಸ್ಲಿಂ, ಸಿದ್ದಿಕ್, ಫಾತಿಮ, ಆಯಿಶ, ಸಹನ, ಸಹೋದರ- ಸಹೋದರಿಯರಾದ ಮೊಯ್ದೀನ್ ಕುಂಞಿ, ಇಸ್ಮಾಯಿಲ್, ನಫೀಸ, ಆಯಿಶ, ಹಾಜಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಅಬ್ದುಲ್ ಖಾದರ್ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page