ವರ್ಕಾಡಿ: ಕಾಸರಗೋಡು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿ ಬದಲಾಗುತ್ತಿರುವ ಹಿಂದೂ ಸಮಾಜಕ್ಕೆ ಅಂತ್ಯಕ್ರಿಯೆಗಳನ್ನು ನಿರ್ವಹಿಸಲು ಕೂಡಾ ಸ್ಥಳ ಹಾಗೂ ಹಕ್ಕು ನಿಷೇಧಿಸಲ್ಪಡುವ ಸನ್ನಿವೇಶವಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ನುಡಿದರು. ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ವರ್ಕಾಡಿ ಪಂಚಾಯತ್ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆಯಲ್ಲಿ, ಪರಿಪಾಲನೆಯಲ್ಲಿ ವಿವಿಧ ಪಂಚಾಯತ್ ಆಡಳಿತ ಸಮಿತಿಗಳು ತೀವ್ರ ಅನಾಸಕ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದರು. ಹಲವು ಸ್ಥಳಗಳಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ವಶಪಡಿಸಲಾಗಿದೆ ಎಂದು, ಕುಂಜತ್ತೂರು ಮಾಡ, ವರ್ಕಾಡಿಯ ಘಟನೆಗಳು ಇದಕ್ಕೆ ಉದಾಹರಣೆಯಾಗಿ ಅವರು ಸೂಚಿಸಿದರು.
ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆಗೆ ಅಗತ್ಯದ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸುವುದರಲ್ಲಿ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ವರ್ಕಾಡಿ ಪಂ. ಸಮಿತಿ ಅಧ್ಯಕ್ಷ ಭಾಸ್ಕರ್ ಪೊಯ್ಯೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಉಪಾಧ್ಯಕ್ಷ ಮಣಿಕಂಠ ರೈ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಬಳ್ಳೂರು, ಮುಖಂಡರಾದ ಧೂಮಪ್ಪ ಶೆಟ್ಟಿ, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ವಿವೇಕಾನಂದ ಶೆಟ್ಟಿ, ರಕ್ಷಣ್, ಜನಪ್ರತಿನಿಧಿಗಳಾದ ತುಳಸಿ ಕುಮಾರಿ, ಚಂದ್ರಶೇಖರ, ಜಗದೀಶ್ ಚೆಂಡೇಲ್, ಕಾರ್ತೀಶ್, ಸುಖಿರಾಜ್ ಶೆಟ್ಟಿ, ಸಂಪತ್, ಕೃಷ್ಣಮೂರ್ತಿ ನೂಜಿ, ಸುರೇಶ್ ಶೆಟ್ಟಿ ಸೊಡಂಕೂರ್ ಮಾತನಾಡಿದರು. ಮಜೀರ್ಪಳ್ಳ ಜಂಕ್ಷನ್‌ನಿಂದ ಆರಂಭಿಸಿದ ಪ್ರತಿಭಟನಾ ಮಾರ್ಚ್‌ನ್ನು ಪಂಚಾಯತ್ ಕಚೇರಿ ಮುಂಭಾಗ ಪೊಲೀಸರು ತಡೆದರು.







