ಉಸ್ಬಕಿಸ್ಥಾನದಲ್ಲಿ ಕೇರಳೀಯ ವಿದ್ಯಾರ್ಥಿನಿಯ ಕೊಲೆಗೆ ಕಾರಣ ಮತಾಂತರಕ್ಕೆ ನಿರಾಕರಣೆ -ಆರೋಪ: ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ

ಕೊಚ್ಚಿ: ಉಸ್ಬಕಿಸ್ಥಾನದಲ್ಲಿ  ಆಲಪ್ಪುಳ ನಿವಾಸಿಯಾದ ಮೆಡಿಕಲ್ ವಿದ್ಯಾರ್ಥಿನಿಯನ್ನು ಸಹಪಾಠಿಯಾದ ಮಲಪ್ಪುರಂ ನಿವಾಸಿ ತಲೆಗೆ ಹೊಡೆದು ಕೊಲೆಗೈಯ್ಯಲು ಕಾರಣ ಆಕೆ ಮತಾಂತರಗೊಳ್ಳಲು ನಿರಾಕರಿಸಿರುವುದೇ ಆಗಿದೆಯೆಂಬ ಆರೋಪ ಕೇಳಿಬಂದಿದೆ.  ಆಲಪ್ಪುಳದ ಹರಿಪ್ಪಾಡ್ ಪಿಲಾಕುಳ ಪುದುಕ್ಕಾಡ್‌ನ ಸುಪ್ರಭಾ ಭವನದ ಬಸಂತ್ ಹಾಗೂ ಮಿನಿ ದಂಪತಿಯ ಪುತ್ರಿ ಸಾವರಿಯ (22) ಪೈಶಾಚಿಕ ರೀತಿಯಲ್ಲಿ ಕೊಲೆಗೈಯ್ಯಲ್ಪಟ್ಟ ದುರ್ದೈವಿಯಾಗಿದ್ದಾಳೆ.   ಈ ಪ್ರಕರಣಕ್ಕೆ ಸಂಬಂಧಿಸಿ ಸಾವರಿಯಳ ಸಹಪಾಠಿಯೂ ಮಲಪ್ಪುರಂ ಪೆರಿಂದಲ್‌ಮಣ್ಣ ನಿವಾಸಿಯಾದ ಸದರುಲ್ ಅನಂ (23) ಎಂಬಾತ ನನ್ನು ಉಸ್ಬಕಿಸ್ಥಾನದಲ್ಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಾವರಿಯಳ ಮೃತದೇಹವನ್ನು ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ದೇಹದ ವಿವಿಧೆಡೆ ಹಲ್ಲೆಯ ಗಾಯಗಳು ಕಂಡುಬಂದಿವೆ. ತಲೆಗೆ ಉಂಟಾದ ಹೊಡೆತವೇ ಸಾವರಿಯಳ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢೀಕರಿಸಲಾಗಿದೆ. ಕಾಲಿನಿಂದ ತಲೆಯವರೆಗೆ ಹಲವೆಡೆ ಹಲ್ಲೆಯ ಗಾಯ ಗಳಿವೆ. ಇದೇ ವೇಳೆ  ಘಟನೆಯ ಬಗ್ಗೆ ಹರಿಪ್ಪಾಡ್ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸುವಂತೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ನಿರ್ದೇಶ ನೀಡಿದ್ದಾರೆ. ಸದರುಲ್ ಅನಂ ಹಾಗೂ ಸಾವರಿಯ  ಉಸ್ಬಕಿಸ್ಥಾನದ ಬುಕಾರ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಈಮಧ್ಯೆ ಸಾವರಿಯ ಮತಾಂತರಗೊಳ್ಳುವಂತೆ ಸದರುಲ್  ಅನಂ ಒತ್ತಾಯಿಸಿದ್ದನೆಂದೂ ಆದರೆ ಅದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಳೆನ್ನಲಾಗಿದೆ.   ಈ ದ್ವೇಷ ದಿಂದ ಸಾವರಿಯಳಿಗೆ ಗಂಭೀರ ಹಲ್ಲೆಗೈಯ್ಯಲಾಗಿದೆ ಯೆಂದು ಸಂಬಂಧಿಕರು ಆರೋಪಿಸಿದ್ದಾರೆ.

RELATED NEWS

You cannot copy contents of this page