ಡಾ. ಕಯ್ಯಾರರ ಹೆಸರಲ್ಲಿ ಸಂಶೋಧನಾ ಕೇಂದ್ರ: ಜಿಲ್ಲಾ ಪಂ. ಸಭೆಯಲ್ಲಿ ಪ್ರಸ್ತಾಪ : ಎರಡು ತಿಂಗಳೊಳಗೆ ಅಧ್ಯಯನ ವರದಿ ಸಲ್ಲಿಸಲು ಉಪಸಮಿತಿ ನೇಮಕ

ಕಾಸರಗೋಡು: ಸ್ವಾತಂತ್ರ‍್ಯ ಹೋರಾಟಗಾರ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಎಂಟು ವರ್ಷಗಳ ಹಿಂದೆಯೇ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಬಿಟ್ಟುಕೊಟ್ಟ 3೦ ಸೆಂಟ್ಸ್ ಸ್ಥಳದಲ್ಲಿ ಕೇಂದ್ರ ಆರಂಭಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಾಹಂ ಉಪಸಮಿತಿಗೆ ರೂಪು ನೀಡಿದ್ದಾರೆ. ನಿನ್ನೆ ಜಿಲ್ಲಾ ಪಂ. ಆಡಳಿತ ಸಮಿತಿ ಸಭೆಯಲ್ಲಿ ಸದಸ್ಯ ಸೋಮಶೇಖರ ಜೆ.ಎಸ್. ನೀಡಿದ ನೋಟೀಸ್‌ನ ಅಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಷಯವನ್ನು ಮಂಡಿಸಿದ ಜೆ.ಎಸ್.ಸೋಮಶೇಖರ, ಡಾ. ಕಯ್ಯಾರರ ಮಕ್ಕಳು ಸಂಶೋಧನಾ ಕೇಂದ್ರ ನಿರ್ಮಿಸುವುದಕ್ಕಾಗಿ ಬದಿಯಡ್ಕ ಪಂ.ನಲ್ಲಿ ೩೦ ಸೆಂಟ್ಸ್ ಜಾಗವನ್ನು 2018ರಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಿದ್ದರು. ಒಡಂಬಡಿ ಪ್ರಕಾರ ಮೂರು ವರ್ಷದೊಳಗೆ ಕಟ್ಟಡ ಪೂರ್ತಿಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ ಜಾಗ ನೋಂದಣಿಯಾಗಿ ೮ ವರ್ಷಗಳ ನಂತರವೂ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸ್ವಾತಂತ್ರ‍್ಯಕ್ಕಾಗಿ ಹೋರಾಟ ನಡೆಸಿದ ಹಿರಿಯ ಮಹಾಕವಿ ಮತ್ತು ಅವರ ಕುಟುಂಬದೊAದಿಗೆ ಮಾಡಿದ ನಿರ್ಲಕ್ಷ್ಯವಾಗಿದೆ ಇದೆಂದು ಆರೋಪವಿದೆ. ಕಯ್ಯಾರರ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಕುಟುಂಬ ಒದಗಿಸಿದ ಭೂಮಿಯಲ್ಲಿ ಈಗ ಕಾಡು ಬೆಳೆದಿದೆ. ಉಚಿತವಾಗಿ ನೀಡಿದ ಭೂಮಿಯಲ್ಲಿ ಸ್ಮಾರಕ ಸಂಶೋಧನಾ ಕೇಂದ್ರದ ನಿರ್ಮಾಣವನ್ನು ೩ ವರ್ಷಗಳೊಳಗೆ ಪೂರ್ಣಗೊಳಿಸಬೇಕೆಂಬ ಜಿಲ್ಲಾ ಪಂ. ಒಪ್ಪಂದ ಈಡೇರದ ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲಾ ಪಂ. ಸಭೆಯಲ್ಲಿ ಡಾ. ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಅಗತ್ಯ ಹಣವನ್ನು ತಕ್ಷಣವೇ ಮಂಜೂರು ಮಾಡಿ, ನಿರ್ಮಾಣ ಕಾರ್ಯವನ್ನು ತಕ್ಷಣ ಪ್ರಾರಂಭಿಸಬೇಕು, ಜಿಲ್ಲಾ ಪಂ.ಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದರೆ, ಉಚಿತವಾಗಿ ನೀಡಲಾದ ೩೦ ಸೆಂಟ್ಸ್ ಭೂಮಿಯನ್ನು ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಕುಟುಂಬಕ್ಕೆ ಹಿಂದಿರುಗಿಸಬೇಕು ಮತ್ತು ಬದಿಯಡ್ಕದಲ್ಲಿ ನೋಂದಾಯಿಸಲಾದ ಕವಿತ ಕುಟೀರ ಪೆರಡಾಲ ಸ್ಮಾರಕ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಅವಕಾಶ ನೀಡಬೇಕು, ಅದೂ ಸಾಧ್ಯವಾಗದಿದ್ದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಧಿಯನ್ನು ಬಳಸಿಕೊಂಡು ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸುವ ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಒದಗಿಸಬೇಕು ಮುಂತಾದ ಬೇಡಿಕೆಯನ್ನು ಸಭೆಯಲ್ಲಿ ಜೆ.ಎಸ್. ಸೋಮಶೇಖರ ಮುಂದಿಟ್ಟರು. ೨೦೧೮ರಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ನಡೆದ ಜಿಪಂ ಆಡಳಿತ ಸಮಿತಿಯಲ್ಲಿದ್ದ ಜಿಲ್ಲಾ ಪಂ. ಸದಸ್ಯ ಹರ್ಷಾದ್ ವರ್ಕಾಡಿ ಅವರು ಕಯ್ಯಾರರ ಹೆಸರಲ್ಲಿರುವ ಇಂತಹ ಕೇಂದ್ರ ಸ್ಥಾಪಿಸುವ ಮಹತ್ವದ ಕುರಿತು ತಿಳಿಸಿದರು.

RELATED NEWS

You cannot copy contents of this page