ಬಂದಡ್ಕ: ಮನೆಯ ಅಡುಗೆ ಕೊಠಡಿ ಯೊಳಗೆ ನುಗ್ಗಿ ಒಲೆ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮುದುಡಿಕೊಂಡ ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದ್ದು ಮನೆಯವರು ಅದನ್ನು ನೋಡಿ ಬೆಚ್ಚಿಬಿದ್ದ ಘಟನೆ ನಡೆದಿದೆ.
ಬಂದಡ್ಕ ಸಮೀಪದ ಮಾಣಿಮೂಲೆ ಪಿ.ಕೆ. ಬಾಲಕೃಷ್ಣನ್ ಎಂಬವರ ಮನೆಯ ಅಡುಗೆ ಕೊಠಡಿಯ ಒಲೆ ಬಳಿ ಇರಿಸಲಾಗಿದ್ದ ಪಾತ್ರೆಗಳ ಎಡೆಯಲ್ಲಿ ಕಾಳಿಂಗ ಸರ್ಪ ಅವಿತುಕೊಂಡಿತ್ತು. ಅಡುಗೆ ಕೊಠಡಿಯ ಬಾಗಿಲು ತೆರೆದಿಟ್ಟ ಸಂದರ್ಭದಲ್ಲಿ ಕಾಳಿಂಗ ಸರ್ಪ ಕೊಠಡಿಯೊಳಗೆ ಪ್ರವೇಶಿಸಿದ್ದಿರ ಬಹುದೆಂದು ಅಂದಾಜಿಸಲಾಗಿದೆ. ಮನೆಯವರು ಅಡುಗೆ ತಯಾರಿಸಲು ಒಲೆ ಬಳಿ ಬಂದಾಗ ಕಾಳಿಂಗ ಸರ್ಪ ಪತ್ತೆಯಾಗಿದೆ. ಅವರು ನೀಡಿದ ಮಾಹಿತಿಯಂತೆ ಬೋವಿ ಕ್ಕಾನದಿಂದ ಅರಣ್ಯ ಇಲಾಖೆಯ ರ‍್ಯಾಪಿಡ್ ರೆಸ್ಪೋನ್ಸ್ ಟೀಂ ಕೂಡಲೇ ಸ್ಥಳಕ್ಕಾಗಮಿಸಿ ಕಾಳಿಂಗ ಸಪವನ್ನು ಸೆರೆಹಿಡಿಯುವಲ್ಲಿ ಸಫಲರಾದರು. ಬಳಿಕ ಅದನ್ನು ಸುರಕ್ಷಿತ ತಾಣಕ್ಕೆ ತಲುಪಿಸಲಾಯಿತು. ಆ ಮೂಲಕ ಸಂಭಾವ್ಯ ಭಾರೀ ಅನಾಹುತ ತಪ್ಪಿಹೋಗಿದೆ. ಈ ಕಾಳಿಂಗಸರ್ಪ ಎಂಟು ಅಡಿ ಉದ್ದವಿದ್ದು, ೧೬ ಕಿಲೋ ತೂಕವಿತ್ತೆಂದು ಅರಣ್ಯಪಾಲಕರು ತಿಳಿಸಿದ್ದಾರೆ.





