ಉಪ್ಪಳ: ಅಂಗಳದಲ್ಲಿದ್ದ ಒಂದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ. ಜೋಡುಕಲ್ಲು ಕಲ್ಪಣೆ ನಿವಾಸಿ ಗುರುಪ್ರಸಾದ್ ಆಚಾರ್ಯ-ತುಳಸಿ ದಂಪತಿಯ ಮಗು ಋತ್‌ರಾಜ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಶನಿವಾರ ಮಧ್ಯಾಹ್ನ ತಾಯಿ ಬಟ್ಟೆ ಒಗೆದು ಒಣಗಿಸಲು ಹಾಕುತ್ತಿದ್ದ ವೇಳೆ ಮಗು ಅಲ್ಲಿತ್ತು. ಈ ವೇಳೆ ರಸ್ತೆಯಿಂದ ನಾಯಿ ಅಂಗಳಕ್ಕೆ ತಲುಪಿ ಮಗುವಿನ ಮೇಲೆ ಹಾರಿ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಕೂಡಲೇ ತಾಯಿ ನಾಯಿಯನ್ನು ಓಡಿಸಿದ್ದಾರೆ. ಮುಖಕ್ಕೆ ಗಂಭೀರ ಗಾಯಗೊಂಡ ಮಗುವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ, ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪರಿಸರದ ಮೈದಾನದಲ್ಲಿ ಮೇಯಲು ಕಟ್ಟಿದ್ದ ಚಂದ್ರಶೇಖರ ಶೆಟ್ಟಿ ಎಂಬವರ ದನ ಹಾಗೂ ಕರುವಿಗೆ ಇದೇ ನಾಯಿ ಕಚ್ಚಿ ಗಾಯಗೊಳಿಸಿರುವುದಾಗಿ ದೂರಲಾಗಿದೆ. ಈ ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ ವ್ಯಾಪಕಗೊಂಡಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಲು ಊರವರು ಒತ್ತಾಯಿಸಿದ್ದಾರೆ.






