ಕಾಸರಗೋಡು ನಗರದ ಮೀನು ಮಾರುಕಟ್ಟೆ ಆಧುನಿಕ ರೀತಿಯಲ್ಲಿ ನಿರ್ಮಿಸಲು ಫಿಶರೀಸ್ ಇಲಾಖೆ ಸಚಿವರಿಗೆ ನಗರಸಭೆಯಿಂದ ಮನವಿ

ಕಾಸರಗೋಡು: ನಗರದ ಪ್ರಧಾನ ಮೀನು ಮಾರಾಟ ಕೇಂದ್ರವಾದ ನಗರಸಭೆಯ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆ ಆಧುನಿಕ ಸೌಕರ್ಯಗಳೊಂದಿಗೆ ವಿಶಾಲವಾದ ಮೀನು ಮಾರುಕಟ್ಟೆ ಸಮುಚ್ಚಯವಾಗಿ ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಶಾಸಕ ಕಲ್ಲಟ್ರ ಮಾಹಿನ್‌ರ ಉಪಸ್ಥಿತಿಯಲ್ಲಿ ಫಿಶರೀಸ್ ಇಲಾಖೆ ಸಚಿವ ವಿ.ಇ. ಅಬ್ದುಲ್ ಗಫೂರ್‌ಗೆ ಮನವಿ ನೀಡಲಾಯಿತು. ಪ್ರಸ್ತುತ ಇರುವ ಮೀನು ಮಾರುಕಟ್ಟೆಯಲ್ಲಿ ಹಲವಾರು ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಸಂದಿಗ್ಧತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ನೇತೃತ್ವದಲ್ಲಿ ಈ ಮನವಿ ನೀಡಲಾಗಿದೆ. ರಾಜ್ಯ ಫಿಶರೀಸ್ ಬೋರ್ಡ್ ನಿರ್ಮಿಸಿ ನಗಸಭೆಗೆ ಹಸ್ತಾಂತರಿಸಿದ  ಈ ಕಟ್ಟಡ ಸ್ಥಳಕ್ಕೆ ಸೂಕ್ತವಾದ ರೀತಿಯಲ್ಲಿ ನಿರ್ಮಿಸಲಾಗಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ. ಮೀನು ಮಾರುಕಟ್ಟೆಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಿರುವ ವ್ಯವಸ್ಥೆಯ ಕೊರತೆ ಸೂಕ್ತವಲ್ಲದ ಚರಂಡಿ, ಶುಚಿತ್ವ ಸಮಸ್ಯೆಗಳು, ವಾಯು ಸಂಚಾರದ ಕೊರತೆ, ಪಾರ್ಕಿಂಗ್ ಸೌಕರ್ಯಗಳ ಕೊರತೆ ಮೊದಲಾದ ಹಲವು ಸಮಸ್ಯೆಗಳನ್ನು ಮಾರುಕಟ್ಟೆಯಲ್ಲಿ ಎದುರಿಸಲಾಗುತ್ತಿದೆ. ಇದರಿಂದಾಗಿ ಮೀನು ವ್ಯಾಪಾರಿಗಳಿಗೂ, ಗ್ರಾಹಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಲಾಗಿದೆ.

ಕಾಸರಗೋಡು ನಗರದ ದೀರ್ಘ ಕಾಲ ಅಭಿವೃದ್ಧಿ ಬೇಡಿಕೆಯನ್ನು ಗಣನೆಗೆ ತೆಗೆದು ಈಗಿರುವ ಮಾರುಕಟ್ಟೆಗೆ ಶಾಶ್ವತ ಪರಿಹಾರ ಕಾಣುವುದು ಎಂಬ ಉದ್ದೇಶದೊಂದಿಗೆ ನಗರಸಭೆ ಈ ಯೋಜನೆಯನ್ನು ಮುಂದಿಟ್ಟಿದೆ. ಈಗಿರುವ ಮಾರುಕಟ್ಟೆಗೆ ಹೊಂದಿಕೊಂ ಡಿರುವ ಸೂಕ್ತವಾದ ಸ್ಥಳ ಹಾಗೂ ಕಟ್ಟಡಗಳನ್ನು ಸಹಿತ ಸಂಯೋಜಿಸಿ ಕೊಂಡು ಆಧುನಿಕ ಸೌಕರ್ಯಗಳೊಂ ದಿಗಿನ ವಿಶಾಲವಾದ ಮೀನು ಮಾರು ಕಟ್ಟೆ ಸಮುಚ್ಚಯ ನಿರ್ಮಿಸಲು ನಗರಸಭೆ ಉದ್ದೇಶಿಸಿದೆ. ಯೋಜನೆಯ ಸಮಗ್ರ ವರದಿ ಸಿದ್ಧಪಡಿಸಲು ನಗರಸಭೆಯ ಬಜೆಟ್‌ನಲ್ಲಿ ಈಗಾಗಲೇ ಮೊತ್ತ ಮೀಸ ಲಿರಿಸಿರುವು ದರಿಂದ ಯೋಜನೆಯ ಮುಂದಿನ ಕ್ರಮಗಳನ್ನು ತುರ್ತಾಗಿ ಆರಂಭಿಸಲು ಸಾಧ್ಯವಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಯೋಜನೆಗೆ ರಾಜ್ಯ ಫಿಶರೀಸ್ ಬೋರ್ಡ್‌ನಿಂದ ೨೫ ಕೋಟಿ ರೂ. ಧನ ಸಹಾಯ ಮಂಜೂರು ಮಾಡಲು, ಅಗತ್ಯವಾದ ಆಡಳಿತ ಪರವಾದ ತಾಂತ್ರಿಕ ಒಪ್ಪಿಗೆಯನ್ನು ತುರ್ತಾಗಿ ಲಭ್ಯಗೊಳಿಸಲು ಸಚಿವರು ಮಧ್ಯೆ ಪ್ರವೇಶಿಸಬೇಕೆಂದು ನಗರಸಭೆ ಮನವಿಯಲ್ಲಿ ಆಗ್ರಹಿಸಿದೆ. ನಗರಸಭಾ ಉಪಾಧ್ಯಕ್ಷ ಕೆ. ಮನೀಫ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಮೀನಾ ಮುಜೀಬ್, ಮೆಹರುನ್ನೀಸ ಹಮೀದ್, ಜಾಫರ್ ಕಮಾಲ್, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ನಗರಸಭಾ ಮುಸ್ಲೀಂ ಲೀಗ್ ಅಧ್ಯಕ್ಷ ಕೆ.ಎಂ. ಬಶೀರ್ ತಂಡದಲ್ಲಿದ್ದರು.

You cannot copy contents of this page