ಕುಂಬಳೆ: ನಿನ್ನೆ ಸಂಜೆ ಬೀಸಿದ ಬಲವಾದ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಕುಂಬಳೆಯಲ್ಲಿ ಎರಡು ಮನೆಗಳ ಮೇಲೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಕುಂಬಳೆ ಪಂಚಾಯತ್‌ನ 12ನೇ ವಾರ್ಡ್ ಕೋಟೆಕ್ಕಾರ್‌ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬುಡದಿಂದ ಮುರಿದು ಬಿದ್ದಿದೆ. ಇದೇ ರೀತಿ 24ನೇ ವಾರ್ಡ್ ಶೇಡಿಕಾವಿನಲ್ಲಿ ಮುತ್ತುಕೋಯ ತಂಙಳ್ ಎಂಬವರ ಹೆಂಚಿನ ಮನೆ ಮೇಲೆ ಸಮೀಪದ ಹಿತ್ತಿಲಿನ ಮರದ ರೆಂಬೆ ಮುರಿದು ಬಿದ್ದಿದೆ.
ಈ ಎರಡೂ ಘಟನೆಗಳಿಂದ ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಘಟನೆ ವೇಳೆ ಮನೆಯ ಲ್ಲಿದ್ದವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿಹೋಗಿದೆ. ಇದೇ ವೇಳೆ ಮನೆಗಳ ಪಕ್ಕಾಸು ಮೊದಲಾದವು ಮುರಿದು ಬಿದ್ದಿದ್ದು ಇದರಿಂದ ಕುಟುಂಬಗಳಿಗೆ ವಾಸಿಸಲು ಸೌಕರ್ಯವಿಲ್ಲದೆ ಸಮಸ್ಯೆ ಎದುರಾಗಿದೆ.
ಇದೇ ರೀತಿ ಕಿನಾನೂರು ಕರಿಂದಳ ಪಂಚಾಯತ್‌ನ ನಾಂದಿಯಡ್ಕ ಎಂಬಲ್ಲಿ ಹೆಂಚು ಹಾಸಿದ ಮನೆ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಇಲ್ಲಿನ ಜಾನಕಿ ಎಂಬವರ ಮನೆಗೆ ಮರ ಬಿದ್ದಿದ್ದು, ಈ ವೇಳೆ ಮನೆಯೊಳಗಿದ್ದ ಜಾನಕಿಯವರ ತಾಯಿ ಕೆ. ಮಾಣಿಕ್ಕ (90) ಗಾಯಗೊಂಡಿದ್ದಾರೆ. ಇತ ರರು ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈ ಘಟನೆ ಸಂಭವಿಸಿದೆ.
ಕಾಞಂಗಾಡ್ ಸೌತ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಮೇಲ್ಛಾವಣಿ ಹಾನಿಗೊಂಡಿದೆ. 8 ತರಗತಿ ಕೊಠಡಿಗಳ ಮೇಲೆ ಹಾಸಿದ ರೂಫಿಂಗ್ ಶೀಟ್‌ಗಳು ಗಾಳಿಗೆ ಹಾರಿ ಸಮೀಪದ ಹಿತ್ತಿಲಿನಲ್ಲಿ ಬಿದ್ದಿವೆ. ಅಪಾಯಕಾರಿ ರೀತಿಯಲ್ಲಿ ಮೇಲ್ಛಾವ ಣಿಯ ಇತರ ಭಾಗಗಳು ಸಿಲುಕಿಕೊಂ ಡಿರುವುದರಿಂದ ಸಮೀಪದ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಳೆ ಜೊತೆಗೆ ಬಲವಾದ ಗಾಳಿಯೂ ಬೀಸುತ್ತಿದ್ದು ಇದರಿಂದ ಹಲವೆಡೆಗಳಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ. ರಬ್ಬರ್ ಮರಗಳ ಸಹಿತ ಹಲವು ಮರಗಳು ಮುರಿದು ಬಿದ್ದಿದ್ದು ಕೃಷಿಗೂ ವ್ಯಾಪಕ ನಾಶನಷ್ಟ ಉಂಟಾಗಿರುವುದಾಗಿ ದೂರಲಾಗಿದೆ.






