ಒಂದು ತಿಂಗಳ ಹಿಂದೆ ಮದುವೆಯಾದ ಯುವತಿ ವಿಷ ಸೇವಿಸಿ ಸಾವಿಗೆ ಶರಣು

ಕಾಸರಗೋಡು: ಒಂದು ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ವಿಷ ಸೇವಿಸಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಟಿಕ್ಕೋಲ್ ಬೇತೂರುಪಾರ ವಟ್ಟಂತಟ್ಟ ನಿವಾಸಿಯಾದ ಅಶ್ವತಿ (25) ಸಾವಿಗೀಡಾದ ಯುವತಿಯಾಗಿದ್ದಾಳೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದ ಅಶ್ವತಿ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪರಕ್ಕಳಾಯಿ ಚೀಟ್ಟಕ್ಕಾವ್ ನಿವಾಸಿ ರೂಪೇಶ್‌ರ ಪತ್ನಿಯಾಗಿದ್ದಾಳೆ. ಒಂದು ತಿಂಗಳ ಹಿಂದೆ ಇವರ ಮದುವೆ ನಡೆದಿತ್ತು. ಮೇ 18ರಂದು ಕಾಸರಗೋಡಿನ ವಾಸ ಸ್ಥಳದಲ್ಲಿ ಅಶ್ವತಿ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸ್ಥಿತಿ ಗಂಭೀರವಾದುದರಿಂದ ಪ್ರಾಥಮಿಕ ಚಿಕಿತ್ಸೆಯ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಶ್ವತಿ ಮೃತಪಟ್ಟಳು. ಘಟನೆ ಬಗ್ಗೆ ಕಾಸರಗೋಡು ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

You cannot copy contents of this page