ಪೈಂಟಿಂಗ್ ವೇಳೆ ಬಿದ್ದು ಗಾಯಗೊಂಡ ಕಾರ್ಮಿಕ ಸಾವು

ಕಾಸರಗೋಡು: ಪೈಂಟಿಂಗ್ ಕೆಲಸದ ವೇಳೆ ಕುರ್ಚಿಯಿಂದ ಬಿದ್ದು ಗಾಯಗೊಂಡ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಲ್ಲಿಕೋಟೆ ಕೊಟ್ಟೋಳಿ ನೆಲ್ಲಿಕೋಟ್ ವೆಳಿಪೋಕ್ ಪುದಿಯೋಟ್ಟತ್ತಿಲ್ ಹೌಸ್‌ನ  ಸುರೇಶ್‌ಬಾಬು (63) ಸಾವನ್ನಪ್ಪಿದ ವ್ಯಕ್ತಿ. ಡಿಸೆಂಬರ್ ೬ರಂದು ಬೆಳಿಗ್ಗೆ ಮೇಲ್ಪರಂಬದ ಸಂಸ್ಥೆಯೊಂದರಲ್ಲಿ ಸುರೇಶ್‌ಬಾಬು ಕುರ್ಚಿಯ ಮೇಲೆ ಹತ್ತಿ ಕಾರಿನ ಮೇಲಿನ  ಭಾಗಕ್ಕೆ ಸ್ಪ್ರೇ ಪೈಂಟಿಂಗ್ ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆ ಮತ್ತು ಕೈಗಳಿಗೆ ಗಾಯ ಉಂಟಾಗಿತ್ತು. ತಕ್ಷಣ ಇತರ ಕಾರ್ಮಿಕರು    ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ  ಚಿಕಿತ್ಸೆ ನೀಡಿದ ಬಳಿಕ ಊರಿಗೆ ಕಳುಹಿಸಿಕೊಟ್ಟಿದ್ದರು.  ಈ ತಿಂಗಳ 17ರಂದು ಮನೆಯಲ್ಲಿ ಸುರೇಶ್‌ಬಾಬುರ ಆರೋಗ್ಯ ಹದಗೆಡತೊಡಗಿತು. ನಂತರ ಅವರನ್ನು ಕಲ್ಲಿಕೋಟೆ ವೈದ್ಯಕೀಯ  ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ  ಅದು ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಮೇಲ್ಪರಂಬ ಪೊಲೀಸರು ಈ ಬಗ್ಗೆ  ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಪತ್ನಿ ಅಜಿತಾದೇವಿ, ಮಕ್ಕಳಾದ ಅಜೇಶ್, ಡಾ. ಲೆಸಿಲಿಬಾಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತ ಸುರೇಶ್‌ಬಾಬು ಕಳೆದ ಎಂಟು ವರ್ಷಗಳಿಂದ ಕಾಸರಗೋಡಿನಲ್ಲಿ ವಾಹನಗಳ ಪೈಂಟಿಂಗ್ ಕಾರ್ಮಿಕರಾಗಿ ದುಡಿಯುತ್ತಿದ್ದರು.

You cannot copy contents of this page