ಅಡ್ಯನಡ್ಕ ಬ್ಯಾಂಕ್ ಕಳವು: ಕಾಸರಗೋಡು ಕೇಂದ್ರೀಕರಿಸಿ ತನಿಖೆ ತೀವ್ರ
ಕಾಸರಗೋಡು: ಪೆರ್ಲ ಸಮೀಪದ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಎರಡು ಕಿಲೋ ಚಿನ್ನ ಹಾಗೂ ೧೭ ಲಕ್ಷ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ರ ನೇತೃತ್ವದಲ್ಲಿ ರೂಪೀಕರಿಸಿದ ಪ್ರತ್ಯೇಕ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ತಿಂಗಳ ೭ರಂದು ರಾತ್ರಿ ಬ್ಯಾಂಕ್ನಿಂದ ಕಳವು ನಡೆದಿದೆ. ಬ್ಯಾಂಕ್ನ ಕಟ್ಟಡದ ಹಿಂಭಾಗದ ಕಿಟಿಕಿ ಸರಳುಗಳನ್ನು ಮುರಿದು ತೆಗೆದು ಕಳವು ತಂಡ ಒಳಗೆ ಪ್ರವೇಶಿಸಿದೆ. ಅನಂತರ ಗ್ಯಾಸ್ ಕಟ್ಟರ್ ಉಪಯೋಗಿಸಿ ಲಾಕರ್ ತೆರೆದು ಚಿನ್ನಾಭರಣ ಹಾಗೂ ಹಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮರುದಿನ ಬ್ಯಾಂಕ್ ತೆರೆಯಲು ನೌಕರರು ತಲುಪಿದಾಗಲೇ ಕಳವು ನಡೆದ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಬ್ರೀಝ ಕಾರಿನಲ್ಲಿ ತಲುಪಿದ ತಂಡ ಕಳವು ನಡೆಸಿದೆಯೆಂದು ಬಹುತೇಕ ಖಚಿತಪಡಿಸಲಾಗಿದೆ. ಕಾರು ಪೆರ್ಲ ಭಾಗದಿಂದ ಬರುವುದು ಹಾಗೂ ಅನಂತರ ಮರಳಿ ಹೋಗುವ ದೃಶ್ಯಗಳು ಸಮೀಪದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪೆರ್ಲದಿಂದ ಕಾರು ಪುತ್ತಿಗೆ ರಸ್ತೆಗೆ ತಿರುಗಿ ಹೋಗುವ ದೃಶ್ಯ ಕೂಡಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಕಾರಿನ ನಂಬ್ರಪ್ಲೇಟ್ ನಕಲಿಯಾಗಿ ದೆಯೇ ಎಂಬ ಸಂಶಯ ಹುಟ್ಟಿಕೊಂ ಡಿದೆ. ತನಿಖೆಯನ್ನು ದಾರಿ ತಪ್ಪಿಸಲು ಕಳ್ಳರು ಈ ರೀತಿ ನಡೆಸಿದ್ದಾರೆಯೇ ಎಂದು ಸಂಶಯಿಸಲಾಗುತ್ತಿದೆ.