ಕೊಕ್ಕೆಜಾಲ್ ಲಿಟ್ಲ್ ಬ್ರದರ್ಸ್ ಸಂಘದ ಬೆಳ್ಳಿ ಹಬ್ಬ ವರ್ಷಾಚರಣೆಗೆ ಚಾಲನೆ
ಕಯ್ಯಾರು : ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಕೊಕ್ಕೆಜಾಲ್ ಲಿಟ್ಲ್ ಬ್ರದರ್ಸ್ ಸಂಘದ ಕ್ರಿಸ್ಮಸ್ ಸಂಭ್ರಮ ಕೊಕ್ಕೆಜಾಲ್ ಜಂಕ್ಷನ್ನಲ್ಲಿ ನಡೆಯಿತು. ಸಂಘದ ಬೆಳ್ಳಿಹಬ್ಬ ವರ್ಷಾಚರಣೆಗೆ ಶಾಸಕ ಎ.ಕೆ.ಎಂ ಅಶ್ರಫ್ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಜುಲಿಯಾನ್ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಯ್ಯಾರು ಕ್ರಿಸ್ತರಾಜ ಇಗರ್ಜಿ ಧರ್ಮಗುರು ಫಾ. ವಿಶಾಲ್ ಮೋನಿಸ್, ಪ್ರಾಂಶುಪಾಲ ಮೊಯಿದಿನ್ ಕುಂಞ ಕೆ., ಬ್ಲಾಕ್ ಪಂಚಾಯತ್ ಮಾಜಿ ಸದಸ್ಯೆ ಬೇಬಿ ಶೆಟ್ಟಿ, ಸಿಸ್ಟರ್ ಜಾಸ್ಮಿನ್ ಲೂವಿಸ್ ಭಾಗವಹಿಸಿದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹಮಾನ್ ಎಂಬ ಯುವಕನಿಗೆ ಸಂಘದ ವತಿಯಿಂದ ಹತ್ತು ಸಾವಿರ ರೂ. ಚೆಕ್ನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ರಾಜ್ಯ ಮಟ್ಟದ ಶಾಲಾ ಕ್ರೀಡಾ ಕೂಟದ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಿಯಾಜ್ ಅಹಮ್ಮದ್ರನ್ನು ಗೌರವಿಸಲಾಯಿತು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ಗೊಂಡಿತು. ಜೂಲಿಯಾನ್ ಕ್ರಾಸ್ತ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಪ್ರಕಾಶ್ ಕ್ರಾಸ್ತ ವಂದಿಸಿದರು. ಜೋಸ್ಟಲ್ ಡಿ ಸೋಜ, ಪವಿತಾ ಡಿ ಸೋಜ, ಜೋರ್ಜ್ ಕ್ರಾಸ್ತ ನಿರೂಪಿಸಿದರು.