ಠೇವಣಿ ವಂಚನೆ: 100ರಷ್ಟು ಪ್ರಕರಣಗಳ ವಾರಂಟ್ ಆರೋಪಿ ಸೆರೆ

ಕಾಸರಗೋಡು: ಕೋಟಿಗಟ್ಟಲೆ ರೂ.ಗಳ ಠೇವಣಿ ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ನಂತರ ಉತ್ತರ ಭಾರತದಲ್ಲಿ ತಲೆಮರೆಸಿಕೊಂಡಿದ್ದಾತನನ್ನು ಪೊಲೀಸರು ಬಂಧಿಸಿದ್ದಾರೆ.

ನೀಲೇಶ್ವರದಲ್ಲಿ ಖಾಸಗಿ ಹಣಕಾಸು ಸಂಸ್ಥೆಯೊಂದರ ಶಾಖೆ ಆರಂಭಿಸಿ ಠೇವಣಿ ರೂಪದಲ್ಲಿ ಹಲವರಿಂದ ಹಣ ಪಡೆದು ಬಳಿಕ ವಂಚನೆಗೈದ ಪ್ರಕರಣದ ಆರೋಪಿ ಪೆರುಂಬಳ ನಿವಾಸಿ ಮೇಲೋತ್ ಕುಂಞಿಚಂದು ನಾಯರ್ (64) ಬಂಧಿತನಾದ ವ್ಯಕ್ತಿ. ಅಂಬಲತರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನಂತರ ಕಾಸರಗೋಡು ಚೀಫ್ ಜ್ಯುಡೀಶಿಯಲ್ ನ್ಯಾಯಾಲಯದ ಆದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸ ಲಾಗಿದೆ. ಠೇವಣಿ ವಂಚನೆಗೈದುದಕ್ಕೆ ಸಂಬಂಧಿಸಿ ಆರೋಪಿ ಕುಂಞಿಚಂದು ನಾಯರ್ ವಿರುದ್ಧ ಅಂಬಲತರ, ಮೇಲ್ಪರಂಬ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳಲ್ಲಾಗಿ 100ರಷ್ಟು ಪ್ರಕರಣಗಳು ದಾಖಲುಗೊಂಡಿದೆ.

ಕೇಸುಗಳಲ್ಲಿ ಸಿಲುಕಿಕೊಂಡ ಬಳಿಕ ಆತ ತಲೆಮರೆಸಿಕೊಂಡಿದ್ದನು. ಅದರಿಂದ ಆ ಪ್ರಕರಣಗಳಿಗೆ ಸಂಬಂಧಿಸಿ ಆತನ ಬಂಧನಕ್ಕಾಗಿ ನ್ಯಾಯಾಲಯ ವಾರೆಂಟ್ ಜ್ಯಾರಿಗೊಳಿಸಿತ್ತು. ಈ ಮಧ್ಯೆ ಆರೋಪಿ ಪೆರಿಯ ಗುರುಪುರದಲ್ಲಿರುವ ಆತನ ಎರಡನೇ ಪತ್ನಿಯ ಮನೆಗೆ ಬಂದಿದ್ದನೆಂಬ ಗುಪ್ತ ಮಾಹಿತಿ  ಮೇಲ್ಪರಂಬ ಪೊಲೀಸರಿಗೆ ಲಭಿಸಿತ್ತು. ಅದರಂತೆ ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ರಾಜ್ಯದಾದ್ಯಂತ ಹಲವು ಪೊಲೀಸ್ ಠಾಣೆಗಳಲ್ಲೂ ಬಂಧಿತ ವ್ಯಕ್ತಿಯ ಹೆಸರಲ್ಲಿ ಕೇಸುಗಳಿವೆ ಎಂದು ಪೊಲೀಸರು  ತಿಳಿಸಿದ್ದಾರೆ. ಕೋಟಯಂನ್ನು ಪ್ರಧಾನ ಕೇಂದ್ರವನ್ನಾಗಿ ಕಾರ್ಯವೆಸಗುತ್ತಿದ್ದ ಹಣಕಾಸು ಸಂಸ್ಥೆಯೊಂದರ ಶಾಖೆಯೊಂದನ್ನು ಆರೋಪಿ ನೀಲೇಶ್ವರ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಿಸಿ ಆಕರ್ಷಕ ಬಡ್ಡಿದರ ನೀಡುವುದಾಗಿ ನಂಬಿಸಿ ಹಲವರಿಂದ ಠೇವಣಿ ರೂಪದಲ್ಲಿ ಹಣ ಪಡೆದು ನಂತರ ಹಣ ಹಿಂತಿರುಗಿಸದೆ ವಂಚಿಸಿದ್ದನು. ಇದಕ್ಕೆ ಸಂಬಂಧಿಸಿ ಠೇವಣಿದಾರರೋರ್ವರು ನೀಡಿದ ದೂರಿನಂತೆ 2018ರಲ್ಲಿ ಆರೋಪಿ ವಿರುದ್ಧ ಮೊದಲ ಪ್ರಕರಣ ದಾಖಲಿಸಲಾಗಿತ್ತು.

ಅಂದಿನಿಂದ ಆತ ತಲೆಮರೆಸಿಕೊಂಡಿದ್ದನು. ನಂತರ ಈತನ ವಿರುದ್ಧ ಲಭಿಸಿದ ದೂರಿನಂತೆ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ನೂರರಷ್ಟು ಪ್ರಕರಣಗಳು  ದಾಖಲಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕೋಟಯಂ ನಿವಾಸಿ ವೃಂದಾ ರಾಜೇಶ್ ಈ ಪ್ರಕರಣದ ಒಂದನೇ ಆರೋಪಿಯಾಗಿದ್ದಾಳೆ.  ಕುಂಞಿಚಂದು ನಾಯರ್  ಇದರ ಎರಡನೇ ಆರೋಪಿಯಾ ಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page