ನಾಪತ್ತೆಯಾಗಿದ್ದ ಯುವಕ ನಿರ್ಜನ ಹಿತ್ತಿಲಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮನೆಯಿಂದ ಆಸ್ಪತ್ರೆ ಗೆಂದು ಹೊರಟು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಕಾಡುಪೊದೆ ತುಂಬಿರುವ ನಿರ್ಜನ ಹಿತ್ತಿಲಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿಯ ಮತ್ತಾಡಿ ಎಂಬವರ  ಪುತ್ರ ಗೋಪಾಲ (೨೮) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೇಹ ನಿನ್ನೆ ರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ಕಾಡು ಪೊದೆಗಳಿರುವ ಹಿತ್ತಿಲಲ್ಲಿ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಇಂದು ಬೆಳಿಗ್ಗೆ ಮಂಜೇಶ್ವರ ಸಿ.ಐ ರಜೀಶ್, ಎಸ್.ಐ ಪ್ರಶಾಂತ್ ಮೊದಲಾದವರು ತಲುಪಿದ್ದು, ಮೃತದೇಹವನ್ನು ಮಹಜರು ನಡೆಸಿದ  ಬಳಿಕ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದೆ.

ಇದೇ ವೇಳೆ ಗೋಪಾಲ  ನಾಪತ್ತೆಯಾಗಿ ಬಳಿಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದರಲ್ಲಿ ನಿಗೂಢತೆ ಹುಟ್ಟಿಕೊಂಡಿದೆಯೆನ್ನ ಲಾಗುತ್ತಿದೆ.  ಕೂಲಿ ಕಾರ್ಮಿಕನಾಗಿರುವ ಗೋಪಾಲ ಮೊನ್ನೆ ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೊರಟಿದ್ದರು. ಅನಂತರ ೧೦ ಗಂಟೆ ವೇಳೆ ಮನೆಗೆ ಮರಳಿ ಬಂದಿದ್ದರು. ಮನೆಯವರು   ವಿಚಾರಿಸಿದಾಗ ಅಸೌಖ್ಯವೆಂದು  ತಿಳಿಸಿದ್ದರೆನ್ನ ಲಾಗಿದೆ. ಇದರಿಂದ ಗೋಪಾಲರನ್ನು ಕರೆದುಕೊಂಡು ತಾಯಿ ಸೀತಾ ಆಸ್ಪತ್ರೆಗೆ ಹೊರಟಿದ್ದರು. ಆದರೆ ಗೋಪಾಲ ತಾಯಿಗಿಂತ ಮೊದಲು ನಡೆದುಹೋಗಿದ್ದರು. ಆದರೆ  ತಾಯಿ ರಸ್ತೆಗೆ ತಲುಪಿ ಹುಡುಕಿದರೂ ಗೋಪಾಲ ಪತ್ತೆಯಾಗಿಲ್ಲ. ಇದರಿಂದ ಮನೆಗೆ ಮರಳಿದ ಅವರು ಗೋಪಾಲರ ಮೊಬೈಲ್‌ಗೆ ಕರೆಮಾಡಿದರೂ ಕರೆ ಸ್ವೀಕರಿಸಿಲ್ಲವೆನ್ನಲಾಗಿದೆ. ಇದರಿಂದ   ನಿರಂತರ ಕರೆ ಮಾಡಿದಾಗ ಮಧ್ಯಾಹ ೧೨.೩೦ರ ವೇಳೆ ಕರೆ ಸ್ವೀಕರಿಸಿ  ಮಾತನಾಡಿದ ಗೋಪಾಲ ಕೂಡಲೇ ಸಂಪರ್ಕ ವಿಚ್ಛೇಧಿಸಿದ್ದರು. ಇದರಿಂದ ಸಂಶಯಗೊಂಡ ಮನೆಯವರು ಮತ್ತೆ ಕರೆಮಾಡಿದರೂ ಫೋನೆತ್ತಲಿಲ್ಲವೆನ್ನಲಾಗಿದೆ. ಸಂಜೆ ೫.೩೦ರ ವೇಳೆ ಕರೆ ಮಾಡಿದಾಗ ಪೆರುವೋಡಿ ಎಂಬಲ್ಲಿನ ರಬ್ಬರ್ ತೋಟದ ಕೆಲಸಗಾರನಾದ ವರ್ಗೀಸ್ ಎಂಬವರು ಕರೆ ಸ್ವೀಕರಿಸಿದ್ದಾರೆನ್ನಲಾಗಿದೆ. ಅವರು ಮಾತನಾಡಿ ಫೋನ್ ಹಾಗೂ ಪರ್ಸ್ ಇಲ್ಲಿನ ಹಿತ್ತಿಲ ಸಮೀಪ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆಯೆಂದೂ, ನಿರಂತರ ರಿಂಗಣಿಸುತ್ತಿದ್ದುದರಿಂದಾಗಿ ಗಮನಕ್ಕೆ ಬಂದಿದೆಯೆಂದು ತಿಳಿಸಿದ್ದರು. ಇದರಿಂದ ಸಂಶಯಗೊಂಡ ಮನೆಯವರು ಅಲ್ಲಿಗೆ ತೆರಳಿ ಫೋನ್, ಪರ್ಸ್ ಪಡೆದುಕೊಂಡು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ಆರಂಭಿಸಿದ್ದರು. ಫೋನ್ ಪತ್ತೆಯಾದ ಪೆರುವೋಡಿಯ ಸುತ್ತಮುತ್ತಲ ಪ್ರದೇಶಗಳಲ್ಲಿ  ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಪುತ್ತೂರು, ಕನ್ಯಾನ, ವಿಟ್ಲ ಮತ್ತಿತರ ಸ್ಥಳಗಳಲ್ಲೂ ಹುಡುಕಿದ್ದಾರೆ. ಆದರೂ ಪತ್ತೆಯಾಗದುದರಿಂದ ನಿನ್ನೆ ಬೆಳಿಗ್ಗೆ ಮಂಜೇಶ್ವರ ಠಾಣೆಯಲ್ಲಿ ಲಿಖಿತವಾಗಿ ದೂರು ನೀಡಲಾಗಿದೆ. ಅನಂತರ ಮನೆಯವರು, ಸಂಬಂಧಿಕರು ಹಾಗೂ ನಾಗರಿಕರು  ಸೇರಿ ಹುಡುಕಾಟ ಪುನರಾರಂಭಿಸಿದ್ದರು. ಈ ವೇಳೆ ಪೆರುವೋಡಿಯಲ್ಲಿರುವ ರಾಮಚಂದ್ರ ಭಟ್ ಕುಡಾನ ಎಂಬವರ ನಿರ್ಜನ  ಹಿತ್ತಿಲಿನಲ್ಲಿ ಕಾಡು ಪೊದೆಗಳ ಎಡೆಯಲ್ಲಿ ನಿನ್ನೆ ರಾತ್ರಿ ೯.೩೦ರ ವೇಳೆ ಗೋಪಾಲರ ಮೃತದೇಹ ಪತ್ತೆಯಾಗಿದೆ. ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ದೇಹದಲ್ಲಿ ಇರುವೆಗಳು ಮುತ್ತಿಕೊಂಡಿವೆ.

Leave a Reply

Your email address will not be published. Required fields are marked *

You cannot copy content of this page