ಪೊಲೀಸರು ಹಿಂಬಾಲಿಸಿದ ಕಾರು ಮಗುಚಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ಪೊಲೀಸರ ವಿರುದ್ಧ ಪ್ರಕರಣ ದಾಖಲು
ಕುಂಬಳೆ: ಪೊಲೀಸರು ತಮ್ಮ ಜೀಪಿನಲ್ಲಿ ಹಿಂಬಾಲಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರ ವಿರುದ್ಧ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ರ ನ್ಯಾಯಾಲಯ (೨)ದ ನಿರ್ದೇಶ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದ ಓಣಂ ಹಬ್ಬದ ಋತುವಿನಲ್ಲಿ ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್-ಟು ವಿದ್ಯಾರ್ಥಿ ಪೇರಾಲ್ ಕಣ್ಣೂರು ಫರೋಸ್ (೧೭) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಆತ ಸಾವನ್ನಪ್ಪಿದ್ದನು. ಆ ಕಾರನ್ನು ಕುಂಬಳೆ ಪೊಲೀಸರು ಬೆದರಿಸಿಕೊಂಡು, ಹಿಂಬಾಲಿಸಿಕೊಂಡು ಬಂದಿದ್ದರೆಂದೂ, ಅದುವೇ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವಿದ್ಯಾರ್ಥಿಯ ಸಾವಿಗೆ ಕಾರಣವಾಯಿತೆಂದು ದೂರಿ ಫರೋಸ್‌ನ ಹೆತ್ತವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅದಕ್ಕೆ ಸಂಬಂಧಿಸಿ ಕಾರನ್ನು ಜೀಪಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಇಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶ ನೀಡಿದೆ