ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗೆ ಮರಣದಂಡನೆ
ಕೊಚ್ಚಿ: ಇಡೀ ಕೇರಳವನ್ನೇ ನಡುಗಿಸಿದ, ಅಲುವಾದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತೀ ಕ್ರೂರವಾದ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿ ಬಳಿಕ ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದ ಆರೋಪಿಗೆ ಎರ್ನಾಕುಳಂ ಪೋಕ್ಸೋ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಿಹಾರದ ವಲಸೆ ಕಾರ್ಮಿಕ ಹಾಗೂ ಅಲುವಾದ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿದ್ದ ಆರೋಪಿ ಅಸ್ಫಾಕ್ ಆಲಂ (೨೮)ಎಂಬಾತನಿಗೆ ನ್ಯಾಯಾಲಯ ಇಂದು ಬೆಳಿಗ್ಗೆ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಕ್ಕಳ ದಿನಾಚರಣೆ ದಿನವಾದ ಇಂದು ಎರ್ನಾಕುಳಂ ಫೋಕ್ಸೋ ನ್ಯಾಯಾಲಯದ ನ್ಯಾಯಧೀಶರಾದ ಕೆ. ಸೋಮನ್ ಅವರು ಈ ಶಿಕ್ಷೆ ವಿಧಿಸಿದ್ದಾರೆ. ಬಿಹಾರದ ವಲಸೆ ಕಾರ್ಮಿಕ ದಂಪತಿಯ ಐದು ವರ್ಷದ ಪುತ್ರಿಯನ್ನು ಕಳೆದ ಜುಲೈ ೨೮ರಂದು ಆಲುವಾದಲ್ಲಿರುವ ಅವರ ಕ್ವಾರ್ಟರ್ಸ್ನಿಂದ ಅಪಹರಿಸಿದ ಆರೋಪಿ ಅಸ್ಫಾಕ್ ಆಲಂ ಆಲುವಾದ ಮಾರ್ಕೆಟ್ ಬಳಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಬರ್ಭರವಾಗಿ ಕೊಲೆಗೈದಿದ್ದನು. ಆರೋಪಿಗೆ ಮರಣ ದಂಡನೆ ಹೊರತಾಗಿ ಫೋಕ್ಸೋ ಹಾಗೂ ಐಪಿಸಿಯ ಒಟ್ಟು ೧೩ ಸೆಕ್ಷನ್ಗಳಲ್ಲಾಗಿ ನ್ಯಾಯಾಲಯ ಜೀವಾವಧಿ ಸೇರಿದಂತೆ ಇತರ ಹಲವು ಶಿಕ್ಷೆಗಳನ್ನೂ ವಿಧಿಸಿದೆ.