ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪೇಟೆಯಲ್ಲಿ ಎಟಿಎಂ ಕೆಡವಿ ಹಣ ದೋಚಲು ಪ್ರಯತ್ನ ನಡೆದಿದೆ. ಇದೇ ವೇಳೆ ಅಲರಾಂ ಮೊಳಗಿದುದರಿಂದ ಕಳ್ಳರು ಯತ್ನ ಉಪೇಕ್ಷಿಸಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.
ಇಂದು ಮುಂಜಾನೆ ೩.೩೦ರ ವೇಳೆ ಈ ಕಳವು ಯತ್ನ ನಡೆದಿದೆ. ಸೌತ್ ಇಂಡ್ಯನ್ ಬ್ಯಾಂಕ್‌ನ ಮೊಗ್ರಾಲ್ ಶಾಖೆಯ ಎಟಿಎಂನಿಂದ ಹಣ ಕಳವುಗೈಯ್ಯಲು ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದಾಗ ಅಲರಾಂ ಮೊಳಗಿದೆ. ಆ ಕೂಡಲೇ ಕಳ್ಳರು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆಂದು ಸಂಶಯಿಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ಮೊಗ್ರಾಲ್ ಜಂಕ್ಷನ್‌ನಿಂದ ಅಲ್ಪ ದೂರದಲ್ಲಿ ಪೊಲೀಸರು ಪಟ್ರೋಲಿಂಗ್ ನಡೆಸುತ್ತಿದ್ದರು. ಅಲರಾಂ ಮೊಗುವ ಶಬ್ದ ಕೇಳಿ ಪೊಲೀಸರು ಬ್ಯಾಂಕ್‌ನ ಸಮೀಪದಲ್ಲಿ ತಲುಪುವಷ್ಟರಲ್ಲಿ ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು.
ವಿಷಯ ತಿಳಿದು ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ.ಕೆ. ಶ್ರೀಜಿತ್ ನೇತೃತ್ವದಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಹಿತ ವಿವಿಧೆಡೆ ವ್ಯಾಪಕ ಹುಡುಕಾಟ ನಡೆಸಿದರೂ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕಳ್ಳರದ್ದೆಂದು ಸಂಶಯಿಸುವ ಕೆಲವು ಚಿತ್ರಗಳು ಎಟಿಎಂನ ಸಿಸಿಟಿವಿ ಕ್ಯಾಮರಾದಿಂದ ಲಭಿಸಿದೆ. ಮುಖವಾಡ ಧರಿಸಿ ಕಳ್ಳರು ತಲುಪಿದ್ದರು. ಶ್ವಾನದಳ, ಫಾರೆನ್ಸಿಕ್ ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ನ ಮೆನೇಜರ್ ಜಸ್ಟಿನ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.






