ವ್ಯಾಪಾರಿ ಮನೆಯಿಂದ ಸುಲಿದ ಅಡಿಕೆ ಕಳವು:ಇಬ್ಬರು ಆರೋಪಿಗಳ ಬಂಧನ

ಉಪ್ಪಳ: ಮನೆಯಿಂದ ಸುಲಿದ ಅಡಿಕೆ ಕಳವುಗೈದು ಸಾಗಿಸುತ್ತಿದ್ದ ವೇಳೆ ನಾಗರಿಕರು  ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಇಬ್ಬರು ಆರೋಪಿಗಳ ಬಂಧನ ದಾಖಲಿಸ ಲಾಗಿದೆ.  ಬಾಯಾರು ಪರಿಸರ ನಿವಾಸಿಗಳಾದ ಮೊಹಮ್ಮದ್ ಸಾಲಿ (18), ಮನಾಫ್ (20) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ನಿನ್ನೆ ಮುಂಜಾನೆ 3 ಗಂಟೆ ವೇಳೆ ಈ ಇಬ್ಬರು ಆರೋಪಿಗಳು ಬಾಯಾರು ನಿವಾಸಿಯೂ ಅಡಿಕೆ ವ್ಯಾಪಾರಿಯಾದ ಅಬ್ದುಲ್ ಖಾದರ್ ಎಂಬವರ ಮನೆಯಿಂದ ಅಡಿಕೆ ಕಳವು ನಡೆಸಿದ್ದರು. ಮನೆಯ ಸಿಟೌಟ್‌ನಲ್ಲಿರಿಸಿದ್ದ  ಒಂದು ಕ್ವಿಂಟಾಲ್‌ಗಿಂತ ಹೆಚ್ಚು ಪ್ರಮಾಣದ ಅಡಿಕೆಯನ್ನು ಇವರು ಕಳವುಗೈದು ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಸಮೀಪದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕರ ಗಮನಕ್ಕೆ ಬಂದಿದೆ. ಸಂಶಯಗೊಂಡ ಅವರು ಸ್ಕೂಟರ್ ತಡೆದುನಿಲ್ಲಿಸಿ ಅದರಲ್ಲಿದ್ದ ವರನ್ನು ವಿಚಾರಿಸಿದಾಗ ಅಬ್ದುಲ್ ಖಾದರ್‌ರ ಮನೆಯಿಂದ ಕಳವುಗೈದ ಅಡಿಕೆ ಇದಾಗಿದೆ ಯೆಂದು ತಿಳಿದುಬಂದಿದೆ.  ಈ ಬಗ್ಗೆ ಮಾಹಾತಿ ಲಭಿಸಿದ ಅಬ್ದುಲ್ ಖಾದರ್ ಸ್ಥಳಕ್ಕೆ ತಲುಪಿ ತನ್ನ ಮನೆಯಿಂದ ಕಳವಿಗೀಡಾದ ಅಡಿಕೆ ಇದಾಗಿದೆಯೆಂದು ಖಚಿತಪಡಿಸಿ ದ್ದಾರೆ. ಬಳಿಕ  ಈ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು ತಲುಪಿ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.    ಅಬ್ದುಲ್ ಖಾದರ್ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page