ಅಡೂರು: ಬಾವಿಯಲ್ಲಿ ಚಿರತೆ ಮೃತದೇಹ ಪತ್ತೆ
ಅಡೂರು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರಿನಲ್ಲಿ ಚಿರತೆ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲ್ಪಚ್ಚೇರಿಯ ಮೋಹನ್ ಎಂಬವರ ಉಪಯೋಗ ಶೂನ್ಯವಾದ ಬಾವಿಯಲ್ಲಿ ಚಿರತೆಯ ಮೃತದೇಹ ಕಂಡು ಬಂದಿದೆ. ಆವರಣಗೋಡೆಯಿಲ್ಲದ ಬಾವಿಗೆ ಬಲೆ ಹಾಸಲಾಗಿತ್ತು. ಬಾವಿಯ ಒಳಗಿನಿಂದ ನಿನ್ನೆ ರಾತ್ರಿ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೋಡಿದಾಗ ಚಿರತೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಫೋರೆಸ್ಟ್ ಆಫೀಸರ್ ರಾಜು ಪೆರುಂಬಳರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕೆಲವು ತಿಂಗಳಿಂದ ವಿವಿಧೆಡೆಗಳಲ್ಲಿ ಚಿರತೆಯ ಹಾವಳಿ ತೀವ್ರಗೊಂಡಿದೆ. ತಿಂಗಳ ಹಿಂದೆ ಪಾಂಡಿ ಸಮೀಪ ಚಿರತೆಯೊಂದು ಕುಣಿಕೆಯಲ್ಲಿ ಸಿಲುಕಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಳಿಯಾರು ಪಂಚಾಯತ್ ವ್ಯಾಪ್ತಿಯ ಅರಣ್ಯದಲ್ಲೂ ಚಿರತೆಗಳು ಇರುವುದನ್ನು ಖಚಿತಪಡಿಸಲಾಗಿದ್ದು, ಅವುಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.