ಅಮೆರಿಕಾ ಮಾದರಿಯಲ್ಲಿ ಶಾಲೆಗೆ ನುಗ್ಗಿ ಗುಂಡು ಹಾರಿಸಿ ಯುವಕನ ಪರಾಕ್ರಮ: ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು
ತೃಶೂರು: ಅಮೆರಿಕಾದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗನ್ ಹಿಡಿದು ಶೂಟೌ ಟ್ ನಡೆಸಿದ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಅದೇ ರೀತಿಯ ಘಟನೆ ತೃಶೂರಿನ ವಿವೇಕೋದಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆದಿದೆ.
ಈ ಶಾಲೆಯ ಮಾಜಿ ವಿದ್ಯಾರ್ಥಿ ಯಾದ ಯುವಕನೋರ್ವ ನಿನ್ನೆ ಏರ್ಗನ್ ಹಿಡಿದು ಶಾಲೆಗೆ ಅಕ್ರಮವಾಗಿ ನುಗ್ಗಿ ಏಕಾಏಕಿಯಾಗಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಆಗ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಶಾಲೆಯಲ್ಲಿ ಈ ಹಿಂದೆ ಕಲಿಯುತ್ತಿದ್ದ ವೇಳೆಯಲ್ಲೂ ಈ ಯುವಕ ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದ್ದನು. ಎರಡು ವರ್ಷಗಳ ಹಿಂದೆ ಆತ ಧರಿಸಿದ್ದ ಟೋಪಿಯನ್ನು ಶಾಲಾ ಪ್ರಾಂಶುಪಾಲರು ವಶಕ್ಕೆ ತೆಗೆದು ತಮ್ಮ ಕಸ್ಟಡಿಯಲ್ಲಿರಿಸಿದ್ದರು. ಆ ಟೋಪಿಯನ್ನು ತನಗೆ ಹಿಂತಿರುಗಿಸುವಂತೆ ಆಗ್ರಹಿಸಿ ಯುವಕ ನಿನ್ನೆ ಶಾಲೆಯ ಪ್ರಾಂಶುಪಾಲರ ಕೊಠಡಿಗೆ ಆಗಮಿಸಿದ್ದನು. ಆದರೆ ಟೋಪಿ ತೆಗೆದಿದ್ದ ಪ್ರಾಂಶುಪಾಲರು ಈಗ ಸೇವೆಯಿಂದ ನಿವೃತ್ತಿಹೊಂದಿದ್ದಾರೆಂದು ಅಧ್ಯಾಪಕರು ಯುವಕನಲ್ಲಿ ತಿಳಿಸಿದ್ದರು. ಆದರೂ ಆತ ಹೊರಗೆ ಹೋಗದೆ ಅಲ್ಲೇ ಆಸನದಲ್ಲಿ ಕುಳಿತು ತನ್ನ ಬ್ಯಾಗ್ನಲ್ಲಿದ್ದ ಏರ್ಗನ್ ಹೊರತೆಗೆದು ಯದ್ವಾತದ್ವ ಮೂರು ಬಾರಿ ಗುಂಡು ಹಾರಿಸಿದ್ದನು. ಗುಂಡಿನ ಶಬ್ದ ಕೇಳಿ ಇತರ ಅಧ್ಯಾಪಕರು ಓಡಿ ಬಂದಾಗ ಅವರಿಗೂ ಗನ್ ತೋರಿಸಿ ಬೆದರಿಸಿ ಅಲ್ಲಿಂದ ಆತ ಪಕ್ಕದ ಕ್ಲಾಸ್ ರೂಂಗೆ ನುಗ್ಗಿ ಅಲ್ಲೂ ಗುಂಡು ಹಾರಿಸಿದ್ದಾನೆಂದು ಅಧ್ಯಾಪಕರು ತಿಳಿಸಿದ್ದಾರೆ. ಅಧ್ಯಾಪಕರು ನೀಡಿದ ಮಾಹಿತಿಯಂತೆ ಪೊಲೀಸರು ಆಗಮಿಸಿ ಇತರರ ಸಹಾಯದಿಂದ ಆ ಯುವಕನನ್ನು ಸಾಹಸಿಕ ರೀತಿಯಲ್ಲಿ ಸೆರೆಹಿಡಿದು ಏರ್ಗನ್ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಫಲರಾದರು. ಯುವಕನನ್ನು ನಂತರ ಪೊಲೀಸ್ ಠಾಣೆಗೆ ಒಯ್ದಾಗ ಆತನ ಮನೆಯವರು ಆಗಮಿಸಿ ಯುವಕ ಓರ್ವ ಮಾನಸಿಕ ರೋಗಿಯಾಗಿದ್ದಾನೆಂದೂ, ಹೇಳಿ ಅದಕ್ಕೆ ಸಂಬಂಧಪಟ್ಟ ದಾಖಲುಪತ್ರಗಳನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ಆ ಕುರಿತಾದ ವರದಿಯನ್ನು ಪೊಲೀಸರು ಅಲ್ಲಿನ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಶಾಲೆಗೆ ಅಕ್ರಮವಾಗಿ ನುಗ್ಗಿ ಬೆದರಿಸಿದ್ದಕ್ಕೆ ಸಂಬಂಧಿಸಿ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಆಗ ಹೆತ್ತವರು ನ್ಯಾಯಾಲಯದಲ್ಲಿ ಮಾಡಿಕೊಂಡ ಮನವಿ ಪ್ರಕಾರ ಯುವಕನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು. ಶೂಟೌಟ್ಗೆ ಬಳಸಿದ ಏರ್ಗನ್ನ್ನುಯುವಕ ಕಳೆದ ಸೆ.೨೮ರಂದು ೧೪೦೦ ರೂ.ಗೆ ತೃಶೂರಿನ ಅಂಗಡಿಯೊಂದರಿಂದ ಖರೀದಿಸಿದ್ದನು. ಇದು ಏರ್ ಗನ್ ಆಗಿರುವುದರಿಂದಾಗಿ ಅದನ್ನು ಕೈವಶವಿರಿಸಿಕೊಳ್ಳಲು ಲೈಸನ್ಸ್ನ ಅಗತ್ಯವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.