ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ ಮಹೋತ್ಸವ ನಾಳೆ ಸಮಾಪ್ತಿ

ಮುಳ್ಳೇರಿಯ: ಕಳೆದ ಕೆಲವು ದಿನಗಳಿಂದ ಉತ್ಸವ ಛಾಯೆಯಲ್ಲಿ ನಡೆದು ಬರುತ್ತಿರುವ ಆದೂರು ಶ್ರೀ ಭಗವತೀ ಕ್ಷೇತ್ರದ ಪೆರುಂಕಳಿಯಾಟ ಮಹೋತ್ಸವ ನಾಳೆ ಸಮಾಪ್ತಿಗೊಳ್ಳಲಿದೆ. ಪೆರುಂಕಳಿಯಾಟ ಮಹೋತ್ಸವದ ದಿನಗಳಲ್ಲಿ ಅತ್ಯಂತ ಹೆಚ್ಚು ದೈವಕೋಲಗಳು ನಿನ್ನೆ ಭಕ್ತರನ್ನು ಹರಸಿದ್ದು, ಭಾರೀ ಸಂಖ್ಯೆಯ ಜನರು ಕ್ಷೇತ್ರ ತಲುಪಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸಂಚಾರಗುಳಿಗ, ಮಾಂತ್ರಿಕ ಗುಳಿಗ, ಕಾಟುಕೊಡಾಂತ, ತೂವಕ್ಕಾಳಿ, ತುವಕಾಳನ್, ವೆಳ್ತಭೂತಂ ಮೊದಲಾದ ವಿವಿಧ ದೈವಗಳ ೧೪ ಕೋಲಗಳು ನಿನ್ನೆ ಭಕ್ತರನ್ನು ಹರಸಿವೆ.

ಬೆಳಿಗ್ಗೆ ೧೧ರಿಂದ ಒಂದರ ಹಿಂದೆ ಒಂದರಂತೆ ದೈವಕೋಲಗಳು ಜರಗಿವೆ. ನಿನ್ನೆ ಸುಮಾರು 25,000ದಷ್ಟು ಮಂದಿಗೆ ಆಹಾರ ವಿತರಿಸಲಾಗಿದೆ. ಸಂಜೆ ನಡೆದ ಸಾಂಸ್ಕೃತಿಕ ಸಮ್ಮೇಳನವನ್ನು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅತಿಥಿಯಾಗಿದ್ದರು. ಪ್ರಕಾಶನ್, ಕಾರಡ್ಕ ಪಂ. ಅಧ್ಯಕ್ಷ ಗೋಪಾಲಕೃಷ್ಣ ಭಟ್, ಚಿಕ್ಕಪ್ಪು ನಾಯ್ಕ್, ರವೀಶ ಪಡುಮಲೆ, ಸತೀಶ್ ಶೆಟ್ಟಿ, ಕೆ. ಶ್ರೀಕಾಂತ್ ಮಾತನಾಡಿದರು. ಜನಪದ ಕಲಾವಿದರಿಂದ ಗಾನಮೇಳ, ರಾತ್ರಿ ಯಕ್ಷಗಾನ ಜರಗಿತು.

ಇಂದು ಮುಂಜಾನೆ ಪುದಿಯ ಭಗವತಿ ದೈವ ಬಳಿಕ ವೈರಾಪುರತ್ ವಡಕ್ಕನ್‌ಕೋಡಿ, ಅಸುರಾಳನ್, ವೀರ ಮಹಾಕಾಳಿ, ಕಲ್ಲಂಗರ ಚಾಮುಂಡಿ, ಮೇಚೇರಿ ಚಾಮುಂಡಿ, ವಿಷ್ಣುಮೂರ್ತಿ ಎಂಬೀ ದೈವಗಳು ಜರಗಿದೆ. ಪುನ್ನಕ್ಕಾಲ್, ಉಚ್ಚುಳಿಕಡವತ್, ಆಯಿಟ್ಟಿ ಎಂಬೀ ಭಗವತಿಗಳ ತೋಟ್ಟಂ, ವೈರಾಪುರತ್ ವಡಕ್ಕನ್‌ಕೋಡಿ ದೈವದ ವೆಳ್ಳಾಟ ಹಾಗೂ ರಾತ್ರಿ ಕುಂಟಾರು ಚಾಮುಂಡಿ, ಕಲ್ಲಂಗರ ಚಾಮುಂಡಿ, ಅಸುರಾಳನ್ ದೈವಗಳ ಕೋಲ ನಡೆಯಲಿದೆ.

ಬೆಳಿಗ್ಗೆ ನಡೆದ ಮಾತೃಸಂಗಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ರಾತ್ರಿ 10 ಗಂಟೆಗೆ  ‘ಶಿವಧೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳ ಲಿದೆ. ಯಕ್ಷಗಾನ ಹಾಗೂ ಆಧ್ಯಾತ್ಮಿಕ ಪ್ರವಚನ ಜರಗಲಿದೆ. ನಾಳೆ ಸಮಾಪ್ತಿಗೊಳ್ಳುವ ಈ ಪೆರುಂಕಳಿಯಾಟ ಮಹೋತ್ಸವದಲ್ಲಿ ಎರಡು ದಿನಗಳಲ್ಲಾಗಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇರಿಸಲಾಗಿದ್ದು, ಅದಕ್ಕಾಗಿ ವಿವಿಧ ಸಿದ್ಧತೆಗಳನ್ನು ನಡೆಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page