ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳಿಗೆ ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ
ಕಾಸರಗೋಡು: ಮುಂದಿನ ವಾರ ನಡೆಯಲಿರುವ ಕೇರಳ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಲಭಿಸಿರುವುದು ಕೋಟ್ಟಯಂ, ಎರ್ನಾಕುಳಂ ಜಿಲ್ಲೆಗಳಲ್ಲಾಗಿದೆ. ಇದರ ವಿರುದ್ಧ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದೆ. ಜಿಲ್ಲೆಯಲ್ಲಿಯೇ ಸಾಕಷ್ಟು ಕೇಂದ್ರಗಳನ್ನು ಏರ್ಪಡಿಸಬೇಕೆಂಬ ಬೇಡಿಕೆಯೂ ತೀವ್ರಗೊಂಡಿದೆ. ಈ ಬಗ್ಗೆ ಶಾಸಕ ಎಕೆಎಂ ಅಶ್ರಫ್ ಶಿಕ್ಷಣ ಸಚಿವ ಹಾಗೂ ಎಂಟ್ರನ್ಸ್ ಎಕ್ಸಾಮಿನೇಶನ್ ಕಮೀಶನರ್ಗೆ ಪತ್ರ ನೀಡಿದ್ದಾರೆ. ಜಿಲ್ಲೆಯಲ್ಲಿ ಅಗತ್ಯದ ಸೆಂಟರ್ಗಳನ್ನು ಪತ್ತೆಹಚ್ಚುವುದರಲ್ಲಿ ಬಹಳ ದೊಡ್ಡ ಅನಾಸ್ಥೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ರೈಲುಗಳಲ್ಲಿ ಸಂಚಾರಕ್ಕೆ ಟಿಕೆಟ್ ಲಭಿಸದ ಸ್ಥಿತಿ ಜಿಲ್ಲೆಯಲ್ಲಿ ಇದೆ. ಮುಂದಿನ ವಾರ ನಡೆಯುವ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ರೈಲಿನ ಟಿಕೆಟ್ ಲಭಿಸಲು ಸಾಧ್ಯತೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮೂಲಕದ ದೀರ್ಘ ದೂರ ಪ್ರಯಾಣವು ಸಮಸ್ಯಾತ್ಮಕವಾಗಿದೆ. ಈ ರೀತಿಯ ಸನ್ನಿವೇಶದಲ್ಲಿ ಕಾಸರಗೋಡು ಜಿಲ್ಲೆಯಲ್ಲಿಯೇ ಸೂಕ್ತವಾದ ಪರೀಕ್ಷಾ ಕೇಂದ್ರಗಳನ್ನು ಏರ್ಪಡಿಸಬೇಕೆಂದು ಶಾಸಕರು ಪತ್ರದಲ್ಲಿ ಆಗ್ರಹಿಸಿದ್ದಾರೆ.