ಉದ್ಯಾವರ ರೈಲ್ವೇ ಗೇಟ್ ಮುಚ್ಚಿ ವಾರ ಕಳೆದರೂ ಮುಗಿಯದ ಕಾಮಗಾರಿ: ಸಾರ್ವಜನಿಕರಿಗೆ ಸಮಸ್ಯೆ
ಮಂಜೇಶ್ವರ: ಕಾಮಗಾರಿ ಹೆಸರಲ್ಲಿ ಉದ್ಯಾವರ ರೈಲ್ವೇ ಗೇಟನ್ನು ಮುಚ್ಚಿ ಒಂದು ವಾರ ಕಳೆದಿದ್ದು, ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆಯೆಂದು ಸ್ಥಳೀಯರು ದೂರಿದ್ದಾರೆ. ಗೇಟು ಮುಚ್ಚಿದ ಹಿನ್ನೆಲೆಯಲ್ಲಿ ಕಾಲೇಜು, ಶಾಲೆ, ಪಂಚಾಯತ್ ಕಚೇರಿ, ಆಸ್ಪತ್ರೆ ಸಹಿತ ವಿವಿಧ ಅಗತ್ಯಗಳಿಗೆ ಮಂಜೇ ಶ್ವರ ಒಳಪೇಟೆಗೆ ತೆರಳಬೇಕಾದವರು ಸಂಕಷ್ಟಕ್ಕೀಡಾಗಿದ್ದಾರೆ. ಉದ್ಯಾವರ, ಕುಂಜತ್ತೂರು, ತೂಮಿನಾಡು ಭಾಗದಿಂದ ಆಸ್ಪತ್ರೆಗೆ ರೋಗಿಗಳನ್ನು ಕೊಂಡೊಯ್ಯಲು ವಾಹನ ಸಾಗುವ ದಾರಿ ಇಲ್ಲದ ಕಾರಣ ಹೊತ್ತುಕೊಂಡೇ ಹೋಗಬೇಕಾದ ಸ್ಥಿತಿ ಉಂಟಾಗಿದೆ. ಇಲ್ಲದಿದ್ದರೆ ಕಿಲೋ ಮೀಟರ್ಗಳ ದೂರದಲ್ಲಿ ಸುತ್ತುಬಳಸಿ ಸಂಚರಿಸಬೇಕಾದ ಸ್ಥಿತಿ ಇದೆ. ಕಾಮಗಾರಿಯನ್ನು ಶೀಘ್ರ ಮುಗಿಸಿ ಮುಚ್ಚಿದ ಗೇಟನ್ನು ತೆರೆದುಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.