ಎಡರಂಗ ಅಭ್ಯರ್ಥಿ ಪ್ರಚಾರ ಆರಂಭ : ಇಂದು ಸಂಜೆ ರೋಡ್ಶೋ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಕೊಲ್ಲಂಗಾನದ ಬಾಲಷ್ಣನ್ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಿ ಪ್ರಚಾರ ಆರಂಭಿಸಲಾಯಿತು. ಅನಂತರ ಎಡನೀರು ಮಠ, ಚೆರ್ಕಳದ ಬಿ.ಎಡ್ ಸೆಂಟರ್, ಮಾರ್ತೋಮ ವಿದ್ಯಾಲಯ, ಚಾಲ ಬಿ.ಎಡ್ ಸೆಂಟರ್, ಸರಕಾರಿ ಕಾಲೇಜು ಎಂಬೆಡೆಗಳಲ್ಲಿ ಸಂದರ್ಶನ ನಡೆಸಿದರು. ಮಧ್ಯಾಹ್ನ ಬಳಿಕ ಸಿವಿಲ್ ಸ್ಟೇಶನ್, ಜನರಲ್ ಆಸ್ಪತ್ರೆ, ತಳಂಗರೆ ಮಾಲಿಕ್ ದಿನಾರ್ ಮಸೀದಿ ಎಂಬೆಡೆಗಳಲ್ಲಿ ಸಂದರ್ಶಿಸಿ ಸಂಜೆ ೫ ಗಂಟೆಗೆ ತಳಂಗರೆಯಿಂದ ರೋಡ್ ಶೋ ಆರಂಭಿಸಲಾಗುವುದು. ಕಾಸರಗೋಡು ಪೇಟೆ, ಕರಂದಕ್ಕಾಡ್, ಉಳಿಯತ್ತಡ್ಕ, ವಿದ್ಯಾನಗರ ಮೂಲಕ ಸಂಚರಿಸುವ ರೋಡ್ ಶೋ ಚೆರ್ಕಳದಲ್ಲಿ ಸಮಾಪ್ತಿಗೊಳ್ಳಲಿದೆ.
ಇದೇ ವೇಳೆ ಯುಡಿಎಫ್, ಬಿಜೆಪಿ ಅಭ್ಯರ್ಥಿಗಳ ಘೋಷಣೆ ಇನ್ನಷ್ಟೇ ನಡೆಯಬೇಕಿದೆ. ಯುಡಿಎಫ್ ಅಭ್ಯರ್ಥಿಯಾಗಿ ರಾಜ್ಮೋಹನ್ ಉಣ್ಣಿತ್ತಾನ್ ಮತ್ತೊಮ್ಮೆ ಸ್ಪರ್ಧಿಸಲಿದ್ದಾ ರೆಂಬ ಸೂಚನೆಯಿದೆ. ಕಾಂಗ್ರೆಸ್ನ ಅಭ್ಯರ್ಥಿ ನಿರ್ಣಯಿಸಲಿರುವ ಸ್ಕ್ರೀನಿಂಗ್ ಕಮಿಟಿ ಇಂದು ಸಭೆ ಸೇರಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಿ.ಕೆ. ಕೃಷ್ಣದಾಸ್ರನ್ನು ಕಣಕ್ಕಿಳಿಸುವ ಬಗ್ಗೆಯೂ ಘೋಷಣೆ ನಾಳೆ ನಡೆಯಲಿದೆಯೆಂಬ ಸೂಚನೆಯಿದೆ.