ಎಸ್ಎಸ್ಎಲ್ಸಿ: ಜಿಲ್ಲೆಯಲ್ಲಿ ಶೇ. 99.57 ಮಂದಿ ಉತ್ತೀರ್ಣ; ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದ 20,348 ವಿದ್ಯಾರ್ಥಿಗಳು
ಕಾಸರಗೋಡು:ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದವರಲ್ಲಿ ಶೇ. 99.57ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 20,400 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಇದರಲ್ಲಿ 20,348 ಮಂದಿ ಉತ್ತೀರ್ಣರಾಗಿ ತಮ್ಮ ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. 2422 ಮಂದಿ ಎಲ್ಲಾ ವಿಷಯಗಳಲ್ಲಿ ಫುಲ್ ಎ ಪ್ಲಸ್ ಪಡೆದಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ 20,473 ಮಂದಿ ಹಾಗೂ 2023ರಲ್ಲಿ 19,466 ಮಂದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ರಾಜ್ಯ ಮಟ್ಟದಲ್ಲಿ ಕಳೆದ ವರ್ಷ ಕಾಸರಗೋಡು ಜಿಲ್ಲೆ 11ನೇ ಸ್ಥಾನ ಪಡೆದಿದ್ದರೆ ಈ ಬಾರಿ ಎಂಟನೇ ಸ್ಥಾನ ಪಡೆದಿದೆ.
ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಈ ಬಾರಿ 11,433 ಮಂದಿ ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 11,349 ಮಂದಿ (ಶೇ. 99.27) ತೇರ್ಗಡೆಗೊಂಡಿದ್ದಾರೆ. ಇನ್ನು ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೆ ಬರೆದ 8967 ಮಂದಿಯಲ್ಲಿ 8962 ಮಂದಿ (ಶೇ. 99.94) ತೇರ್ಗಡೆಗೊಂಡಿದ್ದಾರೆ.
ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಉತ್ತೀರ್ಣರಾದವರಲ್ಲಿ 6081 ಗಂಡು ಹಾಗೂ 5268 ಮಂದಿ ಹೆಣ್ಮಕ್ಕಳು ಒಳಗೊಂಡಿದ್ದಾರೆ. ಇದೇ ರೀತಿ ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ 4646 ಗಂಡು ಮಕ್ಕಳು ಹಾಗೂ 4316 ಹೆಣ್ಮಕ್ಕಳು ಉತ್ತೀರ್ಣರಾಗಿದ್ದಾರೆ. ಇನ್ನು 130 ಶಾಲೆಗಳಲ್ಲಿ ಪರೀಕ್ಷೆಗೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ನಾಯಮ್ಮರಮೂಲೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ 861 ಮಂದಿ ಪರೀಕ್ಷೆಗೆ ಬರೆದಿದ್ದು ಅದರಲ್ಲಿ 859 ಮಂದಿ ತೇರ್ಗಡೆಗೊಂಡಿದ್ದಾರೆ.
ಸರಕಾರಿ ಶಾಲೆಗಳ ಪೈಕಿ ಚಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 327 ಮಂದಿ ಪರೀಕ್ಷೆಗೆ ಬರೆದಿದ್ದು, ಅವರೆಲ್ಲರೂ ತೇರ್ಗಡೆಗೊಂಡಿದ್ದಾರೆ.