ಕನ್ನಡ- ಮಲೆಯಾಳ ಅನುವಾದ ಕಾರ್ಯಾಗಾರ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ
ಕಾಸರಗೋಡು: ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಹಾಗೂ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ನುಳ್ಳಿಪ್ಪಾಡಿ ಇದರ ಜಂಟಿ ಆಶ್ರಯದಲ್ಲಿ ನಿನ್ನೆ ಕನ್ನಡ- ಮಲೆಯಾಳ ಅನುವಾದ ಕಾರ್ಯಾಗಾರ ಕನ್ನಡ ಭವನ ಗ್ರಂಥಾಲಯದಲ್ಲಿ ಜರಗಿತು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉದ್ಘಾಟಿಸಿದರು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್, ದ್ರಾವಿಡ ಭಾಷಾ ಅನುವಾದಕರ ಸಂಘದ ಉಪಾಧ್ಯಕ್ಷ ಡಾ. ಬಿ.ಎಸ್. ಶಿವಕುಮಾರ್ ಭಾಗವಹಿಸಿದರು. ಪ್ರೊ. ರತ್ನಾಕರ ಮಲ್ಲಮೂಲೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕನ್ನಡ ಭವನ ಮತ್ತು ಗ್ರಂಥಾಲಯ ಸಂಸ್ಥಾಪಕ ವಾಮನ ರಾವ್ ಬೇಕಲ್, ಸಾಹಿತಿ ರವೀಂದ್ರನ್ ಪಾಡಿ, ಸಂಧ್ಯಾರಾಣಿ ಟೀಚರ್, ಡಾ. ರೋಶನ್ ವಿ.ಎಸ್, ಭಾಗವಹಿಸಿದರು. ಸುಭದ್ರಮ್ಮ ಪ್ರಾರ್ಥನೆ ಹಾಡಿದರು.
ಸಮಾರೋಪ ಸಮಾರಂಭದಲ್ಲಿ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಕೆ.ವಿ. ಕುಮಾರನ್‌ರನ್ನು ಗೌರವಿಸಲಾಯಿತು. ಡಾ. ಎಸ್.ಎಲ್. ಭೈರಪ್ಪನವರ ಕನ್ನಡ ಕೃತಿ ‘ಯಾನ’ವನ್ನು ಕೆ.ವಿ. ಕುಮಾರನ್ ಮಲೆಯಾಳಕ್ಕೆ ಅನುವಾದಿಸಿದ್ದರು. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ದ್ರಾವಿಡ ಭಾಷಾ ಅನುವಾದಕರ ಸಂಘಟನೆಯ ವತಿಯಿಂದ ಅವರನ್ನು ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ರವಿ ನಾಯ್ಕಾಪು, ವೆಂಕಟ್ರಮಣ ಹೊಳ್ಳ ಸಹಿತ ಹಲವು ಗಣ್ಯರು ಭಾಗವಹಿಸಿ ದರು. ಕನ್ನಡ- ಮಲೆಯಾಳ ಅನುವಾದ ಕಾರ್ಯಾಗಾರದಲ್ಲಿ ಹಲವು ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದರು.