ಕುಣಿಕೆಗೆ ಸಿಲುಕಿ ಚಿರತೆ ಸಾವಿಗೀಡಾದ ಪ್ರಕರಣ: ಕಾಡು ಹಂದಿ ಬೇಟೆಗಾರ ಬಂಧನ; ಇನ್ನೋರ್ವನಿಗೆ ಶೋಧ
ಮುಳ್ಳೇರಿಯ: ಅಡೂರು ಪಾಂಡಿ ಬಳಿ ಮಲ್ಲಂಪಾರೆಯಲ್ಲಿ ಕಾಡು ಹಂದಿಗೆ ಇರಿಸಿದ ಕುಣಿಕೆಯಲ್ಲಿ ಸಿಲುಕಿ ಚಿರತೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಇನ್ನೋರ್ವ ನಿಗಾಗಿ ಶೋಧ ತೀವ್ರಗೊಳಿಸಿದ್ದಾರೆ.
ಮಲ್ಲಂಪಾರೆಯ ಚಂದ್ರಶೇಖರ ನಾಯ್ಕ್ (30) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಕುಣಿಕೆಯಿರಿಸಲು ಈತನ ಜತೆಗಿದ್ದ ಸುಂದರ ಎಂಬಾತನಿಗಾಗಿ ಹುಡುಕಾಟ ನಡೆಯುತ್ತಿದೆಯೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಚಂದ್ರಶೇಖರನ ಮನೆಯಿಂದ ಅಲ್ಪದೂರದಲ್ಲಿ ಚೆನ್ನ ನಾಯ್ಕ್ ಎಂಬವರ ಕೃಷಿ ಸ್ಥಳದಲ್ಲಿ ಕಾಡು ಹಂದಿಯನ್ನು ಹಿಡಿಯಲು ಕೇಬಲ್ ತಂತಿ ಬಳಸಿ ಕುಣಿಕೆಯಿರಿಸಲಾಗಿತ್ತು. ಅಲ್ಲಿಂದ ಸ್ವಲ್ಪ ದೂರದ ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಈ ತಿಂಗಳ 9ರಂದು ಬೆಳಿಗ್ಗೆ ಹೆಣ್ಣು ಚಿರತೆ ಕುಣಿಕೆಯಲ್ಲಿ ಸಿಲುಕಿರುವುದು ಪತ್ತೆಯಾಗಿತ್ತು. ಈ ವೇಳೆ ಚಿರತೆಗೆ ಜೀವವಿತ್ತು. ಮಾದಕ ಗುಂಡು ಹಾರಿಸಿ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಮಧ್ಯಾಹ್ನ ವೇಳೆ ಚಿರತೆ ಸಾವಿಗೀಡಾಗಿತ್ತು. ಇದರಂತೆ ಅರಣ್ಯ ಅಧಿಕಾರಿಗಳು ಕೇಸು ದಾಖಲಿಸಿ ಈ ಪ್ರದೇಶದಲ್ಲಿ ಈ ಹಿಂದೆ ಕಾಡು ಹಂದಿಗೆ ಕುಣಿಕೆ ಇಡುತ್ತಿದ್ದ ತಂಡದಲ್ಲಿದ್ದ ಓರ್ವನನ್ನು ತನಿಖೆಗೊಳಪಡಿಸಿದ್ದರು. ಈತನಿಂದ ಲಭಿಸಿದ ಮಾಹಿತಿಯಂತೆ ಚಂದ್ರಶೇಖ ರನನ್ನು ಕಸ್ಟಡಿಗೆ ತೆಗೆದು ತನಿಖೆಗೊ ಳಪಡಿಸಿದಾಗ ವಿಷಯ ತಿಳಿದುಬಂದಿದೆ. ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ಪಿ. ರಾಜು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಚಂದ್ರಶೇಖರ ಒಳಗೊಂಡ ತಂಡ ಹಲವು ಕಾಡು ಹಂದಿಗಳನ್ನು ಬೇಟೆಯಾಡಿತ್ತೆಂದು ಅರಣ್ಯ ಅಧಿಕಾ ರಿಗಳು ತಿಳಿಸಿದ್ದಾರೆ. ಬಂಧಿತ ಚಂದ್ರಶೇಖರನನ್ನು ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಯಿತು. ಈ ವೇಳೆ ನ್ಯಾಯಾಲಯ ಆರೋಪಿಗೆ ರಿಮಾಂಡ್ ವಿಧಿಸಿದೆ.