ಟ್ಯಾಂಕರ್ ಲಾರಿಯಿಂದ ರಸ್ತೆಯಲ್ಲಿ ಟಾರು ಸೋರಿಕೆ

ಕಾಸರಗೋಡು: ಮಂಗಳೂರಿನಿಂದ ತಮಿಳುನಾಡಿಗೆ ಟ್ಯಾಂಕರ್ ಲಾರಿಯಲ್ಲಿ ಟಾರು ಸಾಗಿಸುತ್ತಿದ್ದ ದಾರಿ ಮಧ್ಯೆ ಚೆಮ್ನಾಡ್ ಸಮೀಪದ ಚಳಿಯಂಗೋ ಡಿನಲ್ಲಿ ನಿನ್ನೆ ರಾತ್ರಿ ಸುಮಾರು ೧೦ ಗಂಟೆಗೆ ಸೋರಿಕೆಯಾಗತೊಡಗಿದ್ದು, ಅದನ್ನು ಗಮನಿಸಿದ ಪ್ರಸ್ತುತ ಲಾರಿ ಚಾಲಕ ತಕ್ಷಣ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ  ಟಾರು ರಸ್ತೆಯ ಮಧ್ಯಭಾಗಕ್ಕೆ ಬೀಳುವುದನ್ನು ತಪ್ಪಿಸಿದ್ದಾರೆ.

ಆ ಬಗ್ಗೆ ನೀಡಲಾದ ಮಾಹಿತಿ ಯಂತೆ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಎರಡು ಇಂಜಿನ್‌ಗಳಲ್ಲಾಗಿ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ಮೇಲೆ ಸತತ ನೀರು ಹಾಯಿಸಿ ಅದರೊಳಗಿದ್ದ ಟಾರನ್ನು ಅಲ್ಲಿಗೆ ಹೆಪ್ಪುಗಟ್ಟುವಂತೆ ಮಾಡುವ ಮೂಲಕ ಸೋರಿಕೆಯನ್ನು ತಡೆಗಟ್ಟುವಲ್ಲಿ ಸಫಲರಾದರು. ನಿನ್ನೆ ರಾತ್ರಿ ೧೦ ಗಂಟೆಗೆ ಆರಂಭಗೊಂಡ  ಅಗ್ನಿಶಾಮಕದಳದ ಈ ಕಾರ್ಯಾಚರಣೆ ಇಂದು ಮುಂಜಾನೆ ೩ ಗಂಟೆ ತನಕ ಮುಂದುವರಿದಿದೆ. ಟಾರು ಹೇರಿದ ಟ್ಯಾಂಕರ್‌ನೊಳಗೆ ಟಾರನ್ನು ೧೩೦ ಡಿಗ್ರಿ ಸೆಲ್ಶಿಯಸ್ ಬಿಸಿಯಲ್ಲಿ ಇರಿಸಲಾಗಿತ್ತು. ಅಗ್ನಿಶಾಮಕದಳ ಟ್ಯಾಂಕರ್‌ನ ಮೇಲೆ ಸತತ ನೀರು ಹಾಯಿಸುವ ಮೂಲಕ ಅದರ ಬಿಸಿಯನ್ನು ತಗ್ಗಿಸುವುದರ ಜತೆಗೆ ಅದನ್ನು ಹೆಪ್ಪುಗಟ್ಟುವಂತೆ ಮಾಡಿತು. ಇಲ್ಲದಿದ್ದಲ್ಲಿ ಟಾರು ರಸ್ತೆಯಿಡೀ ಆವರಿಸಿ ಅದು ವಾಹನ ಸಂಚಾರಕ್ಕೂ ಅಡಚಣೆ  ಸೃಷ್ಟಿಸುವ ಸಾಧ್ಯತೆ ಇತ್ತು.

Leave a Reply

Your email address will not be published. Required fields are marked *

You cannot copy content of this page