ಡ್ರೈವಿಂಗ್ ಟೆಸ್ಟ್ ವಿಳಂಬ ಬಗ್ಗೆ ತರಬೇತಿ ಕೇಂದ್ರ ಮಾಲಕರ ಮನವಿ: ಶೀಘ್ರ ಪ್ರತಿಕ್ರಿಯಿಸಿದ ಸಾರಿಗೆ ಸಚಿವ
ಕಾಸರಗೋಡು: ಡ್ರೈವಿಂಗ್ ಟೆಸ್ಟ್ ನಡೆಸುವುದರಲ್ಲಿ ಉಂಟಾಗುವ ಕಾಲ ವಿಳಂಬದಿಂದಾಗಿ ಕಾಸರಗೋಡು ತಾಲೂಕಿನವರು ಎದುರಿಸುವ ಸಮಸ್ಯೆಗಳ ಬಗ್ಗೆ ಮನವಿ ನೀಡಿದಾಗ ಮಿಂಚಿನ ವೇಗದಲ್ಲಿ ಅದಕ್ಕೆ ಪರಿಹಾರಕ್ಕೆ ಸಾರಿಗೆ ಸಚಿವ ಆಂಟನಿ ರಾಜು ಮಧ್ಯೆಪ್ರವೇಶಿಸಿದ್ದಾರೆ. ತಾಲೂಕಿನ ಡ್ರೈವಿಂಗ್ ಶಾಲೆಗಳ ಮಾಲಕರ ಒಕ್ಕೂಟ ವತಿಯಿಂದ ನಿನ್ನೆ ಕಾಸರಗೋಡಿಗೆ ತಲುಪಿದ ಸಾರಿಗೆ ಸಚಿವರಿಗೆ ಮನವಿ ನೀಡಲಾಗಿತ್ತು. ಕಾಸರಗೋಡು ಅತಿಥಿ ಮಂದಿರದಲ್ಲಿ ಪ್ರಜಾಪ್ರಭುತ್ವವಾದಿ ಕೇರಳ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸನ್ನಿ, ಕಾರ್ಯದರ್ಶಿ ರತೀಶ್, ಡ್ರೈವಿಂಗ್ ಶಾಲೆ ಮಾಲಕರಾದ ಎಫ್.ಆರ್. ಮೇಲ್ಪರಂಬ, ಗಿರೀಶ್, ಸುಕುಮಾರನ್, ಮುತ್ತಪ್ಪನ್, ಪುತ್ತಿಚ್ಚ ಮಜೀರ್‌ಪಳ್ಳ, ಲೋಹಿತ್, ರಾಜೇಶ್, ಕುಂಞಿರಾಮನ್, ಗಣೇಶ್ ಪ್ರಸಾದ್ ಎಂಬಿವರು ಮನವಿ ನೀಡಿದ್ದಾರೆ.
ಲರ್ನಸ್ ಲೈಸನ್ಸ್, ಡ್ರೈವಿಂಗ್ ಟೆಸ್ಟ್ ನಡೆಸುವುದರ ಕಾಲ ವಿಳಂಬದ ಬಗ್ಗೆ, ಟೆಸ್ಟ್ ನಡೆಯುವ ಸ್ಥಳದಲ್ಲಿ ಟಾಯ್ಲೆಟ್ ಬೇಕೆಂಬ ಬಗ್ಗೆ ಮನವಿಯಲ್ಲಿ ಆಗ್ರಹಿಸಲಾಗಿತ್ತು. ಪ್ರಸ್ತುತ ಲರ್ನಸ್ ಲೈಸನ್ಸ್‌ಗೆ ೩೦ ದಿವಸ, ಅದು ಕಳೆದು ಡ್ರೈವಿಂಗ್ ಟೆಸ್ಟ್‌ಗೆ ೪೫ ದಿವಸ ಕಾಯಬೇಕಾಗುತ್ತಿದೆ. ಇದರಿಂದಾಗಿ ಎರಡು ತಿಂಗಳ ಕಾಲಾವಧಿಗೆ ಊರಿಗೆ ತಲುಪುವ ಅನಿವಾಸಿಗಳ ಸಹಿತ ಹಲವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರ ಮರೆಯಲ್ಲಿ ಕೆಲವರು ಕರ್ನಾಟಕ ಪರವಾನಗಿ ಸಿಗುವಂತೆ ಮಾಡುತ್ತಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಸಿಗಬೇಕಾದ ಆದಾಯ ನಷ್ಟವಾಗು ತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಈ ವಿಷಯದಲ್ಲಿ ಕೂಡಲೇ ಟ್ರಾನ್ಸ್‌ಪೋರ್ಟ್ ಕಮಿಶನರ್‌ನ್ನು ಸಚಿವರು ಕರೆಮಾಡಿ ಮಾತನಾಡಿ ಕೂಡಲೇ ಕ್ರಮಕ್ಕೆ ಆಗ್ರಹಿಸಿದರು. ಕಾಸರಗೋಡು ಆರ್‌ಟಿಒ ರವರಿಗೂ ಈ ಬಗ್ಗೆ ನಿರ್ದೇಶ ಸಚಿವ ನೀಡಿದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಶೀಘ್ರ ಪರಿಹಾರವಾಗಬಹುದೆಂಬ ನಿರೀಕ್ಷೆ ಮನವಿ ನೀಡಿದವರಿಗೆ ಉಂಟಾಗಿದೆ.