ನಟಿ ವಿನ್ಸಿಯೊಂದಿಗೆ ಅಸಭ್ಯವಾಗಿ ವ್ಯವಹರಿಸಿದ ನಟ ಶೈನ್ ಟೋಮ್ ಚಾಕೊ; ಹೇಳಿಕೆ ಬಹಿರಂಗ
ಕೊಚ್ಚಿ: ಅಮಲು ಪದಾರ್ಥ ಉಪಯೋಗಿಸಿ ನಟಿ ವಿನ್ಸಿ ಅಲೋಶಿಯಸ್‌ರೊಂದಿಗೆ ಅಸಭ್ಯವಾಗಿ ವ್ಯವಹರಿಸಿದ ನಟ ಶೈನ್ ಟೋಮ್ ಚಾಕೊ ಆಗಿದ್ದಾನೆಂದು ಬಹಿರಂಗಗೊಂಡಿದೆ. ಫಿಲಿಂ ಚೇಂಬರ್‌ಗೆ ನೀಡಿದ ದೂರಿನಲ್ಲಿ ವಿನ್ಸಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಭಿನಯಿಸುವವರ ಸಂಘಟನೆಯಾದ ‘ಅಮ್ಮ’ಗೂ ವಿನ್ಸಿ ದೂರು ನೀಡಿದ್ದರು. ವಿನ್ಸಿಯ ದೂರನ್ನು ಪರಿಗಣಿಸಿ ಸೋಮವಾರ ಫಿಲಿಂ ಚೇಂಬರ್ ಮೋನಿಟರಿ ಸಮಿತಿಯ ತುರ್ತು ಸಭೆ ಜರಗಲಿದೆ ಎಂದು ತಿಳಿಸಲಾಗಿದೆ. ‘ಸೂತ್ರವಾಕ್ಯಂ’ ಸಿನಿಮಾದ ಸೆಟ್‌ನಲ್ಲಿ ನಟ ಅಸಭ್ಯವಾಗಿ ವ್ಯವಹರಿಸಿರುವುದೆಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ನಟಿ ವಿನ್ಸಿ ಅಲೋಶ್ಯಸ್‌ರಿಂದ ಮಾಹಿತಿಗಳನ್ನು ಸಂಗ್ರಹಿಸಲು ಅಬಕಾರಿ ದಳ ಕ್ರಮ ಆರಂಭಿಸಿದೆ. ಎರ್ನಾಕುಳಂ ಎಕ್ಸೈಸ್ ವಿಭಾಗ ಮಾಹಿತಿ ಸಂಗ್ರಹಿಸಲಿದೆ. ಸಿನಿಮಾ ಸೆಟ್‌ನಲ್ಲಿ ನಟ ಮಾದಕ ಪದಾರ್ಥ ಉಪಯೋಗಿಸಿರುವುದಾಗಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅಬಕಾರಿ ತಂಡ ಈ ಕ್ರಮ ಆರಂಭಿಸಿದೆ. ಆದರೆ ದೂರು ನೀಡಿದರೆ ಮಾತ್ರವೇ ಕೇಸು ದಾಖಲಿಸಿ ತನಿಖೆ ನಡೆಸಲು ಸಾಧ್ಯವೆಂದೂ ಕೇವಲ ಹೇಳಿಕೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕೇಸು ದಾಖಲಿಸಲು ಸಾಧ್ಯವಿಲ್ಲವೆಂದು ಅಬಕಾರಿ ದಳ ಸ್ಪಷ್ಟಪಡಿಸಿದೆ.