ನವಂಬರ್ 1ರೊಳಗಾಗಿ ಕೇರಳ ಸಂಪೂರ್ಣ ಕಡುಬಡತನ ಮುಕ್ತ ರಾಜ್ಯವಾಗಲಿದೆ-ಮುಖ್ಯಮಂತ್ರಿ
ಕಾಸರಗೋಡು: ಕೇರಳ ಹೂಡಿಕೆ ಸೌಹಾರ್ದ ರಾಜ್ಯವಾಗಿ ಮಾರ್ಪಡು ತ್ತಿದೆ. ಹೂಡಿಕೆ ಸಾಧ್ಯತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪ ಡಿಸುವ ಗುರಿಯೊಂದಿಗೆ ರಾಜ್ಯ ಮುಂದುವರಿಯುತ್ತಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಾಸರಗೋಡು ಜಿಲ್ಲಾ ಪಂಚಾಯತ್‌ನ ಹೊಸ ಅನೆಕ್ಸ್ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಸರಕಾರಿ ಸೇವೆಗಳು ಜನರಿಗೆ ತ್ವರಿತವಾಗಿ ಲಭಿಸುವ ರೀತಿಯ ಕ್ರಮಗಳನ್ನು ಸರಕಾರ ಆರಂಭಿಸಿದೆ. ಇದರಂತೆ 900ರಷ್ಟು ಸರಕಾರಿ ಸೇವೆಗಳನ್ನು ಈಗ ಆನ್‌ಲೈನ್ ಮೂಲಕ ಲಭಿಸುವಂತೆ ಮಾಡಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆ-ಸ್ಪೋಟ್ ಸೌಕರ್ಯ ಜ್ಯಾರಿಗೊಳಿಸಲಾಗಿದೆ. ಊರ ಅಭಿವೃದ್ಧಿಗಾಗಿ ಸ್ಥಳೀಯಾಡಳಿತದ ಪಾತ್ರ ಕಿರಿದೇನಲ್ಲ. ವಸತಿ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಸಾಂತ್ವನ, ತ್ಯಾಜ್ಯಗಳ ನಿರ್ಮೂಲನೆ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನವಕೇರಳ ಯೋಜನೆಯ ಪ್ರಧಾನ ಗುರಿಯಾಗಿದೆ. ಮಂದಿನ ನವಂಬರ್ ಒಂದರೊಳಗೆ ಕೇರಳ ಸಂಪೂರ್ಣ ಕಡು ಬಡತನದಿಂದ ಮುಕ್ತ ರಾಜ್ಯವಾಗಿ ಬದಲಾಗಲಿದೆಯೆಂದು, ಅದಕ್ಕಿರುವ ಎಲ್ಲಾ ಕ್ರಮದಲ್ಲೂ ಸರಕಾರ ಈಗಾಗಲೇ ತೊಡಗಿದೆಯೆಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 2766 ಕಡುಬಡತನ ದಲ್ಲಿ ಕಳೆಯುತ್ತಿರುವ ಕುಟುಂಬಗಳಿದ್ದು, ಇದರಲ್ಲಿ 1800ದಷ್ಟು ಕುಟುಂಬಗಳನ್ನು ಅದರಿಂದ ಮುಕ್ತಗೊಳಿಸಲು ಸಾಧ್ಯವಾಗಿದೆಯೆಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ. ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಂ. ರಾಜಗೋ ಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಸೇರಿದಂತೆ ಹಲವರು ಭಾಗವಹಿಸಿದರು.