ಪತಿ, ಮೂರು ಮಕ್ಕಳ ಜೊತೆ ಮಲಗಿದ್ದ ಯುವತಿ ನಾಪತ್ತೆ: ಸಹಪಾಠಿ ಆಟೋ ಚಾಲಕ ಕೂಡ ನಾಪತ್ತೆ
ಕಾಸರಗೋಡು: ಪತಿ ಹಾಗೂ ಮೂರು ಮಕ್ಕಳೊಂದಿಗೆ ಆಹಾರ ಸೇವಿಸಿ ನಿದ್ರಿಸಿದ್ದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕುಶಾಲನಗರ ನಿವಾಸಿಯಾದ ರಂಸೀನಾ (30) ನಾಪತ್ತೆಯಾದ ಯುವತಿ. ಸೋಮವಾರ ರಾತ್ರಿ ಎಂದಿನಂತೆ ಪತಿ ಹಾಗೂ ಮಕ್ಕಳ ಜೊತೆ ಆಹಾರ ಸೇವಿಸಿ ನಿದ್ರಿಸಿದ್ದಳು. ಮಂಗಳವಾರ ಮುಂಜಾನೆ 2 ಗಂಟೆ ವೇಳೆ ಪತಿಗೆ ಎಚ್ಚರವಾದಾಗ ರಂಸೀನಾ ನಾಪತ್ತೆಯಾದ ವಿಷಯ ತಿಳಿದುಬಂದಿದೆ. ಮನೆಯೊಳಗೆ ಹುಡುಕಾಡಿದರೂ ಕಂಡುಬಂದಿರಲಿಲ್ಲ. ಈ ವೇಳೆ ಮನೆಯಿಂದ ಚೀಟಿಯೊಂದು ಲಭಿಸಿದ್ದು, ಅದರಲ್ಲಿ ‘ನಾನು ತೆರಳುತ್ತೇನೆ’ ಎಂದು ಬರೆದಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ನಾಪತ್ತೆಯಾದ ಬಗ್ಗೆ ಪತಿ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ರಂಸೀನಾಳ ಸಹಪಾಠಿ ಸದ್ದಾಂಮುಕ್ಕ್ ನಿವಾಸಿ ಆಟೋ ಚಾಲಕ ಅಸ್ಕರ್ ಕೂಡ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು, ಈತನ ಜೊತೆಯಲ್ಲಿ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ. ಅಸ್ಕರ್‌ನ ಮೊಬೈಲ್ ಫೋನ್ ಸ್ವಿಚ್‌ಅಫ್ ಆಗಿದ್ದು, ಆಟೋ ರಿಕ್ಷಾ ಊರಿನಲ್ಲೇ ಕಂಡುಬಂದಿದೆ.