ಪೊಲೀಸರ ಬಲೆಯಲ್ಲಿ ಸಿಲುಕಿದ ಅಪ್ರಾಪ್ತ ಸೈಕಲ್ ಕಳವು ಆರೋಪಿಗಳು
ಹೊಸದುರ್ಗ: ತಿಂಗಳ ಹಿಂದೆ ಕಾಞಂಗಾಡ್ ಸೌತ್ ಶಾಲಾ ಪರಿಸರದಿಂದ ವಿದ್ಯಾರ್ಥಿನಿಯ ಸೈಕಲನ್ನು ಕಳವುಗೈದ ದೂರಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ಹುಡುಕಾಡುತ್ತಿದ್ದ ಮಧ್ಯೆ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇತ್ತೀಚೆಗೆ ವಿದ್ಯಾರ್ಥಿನಿಯ ಸೈಕಲ್ ಕಳವುಗೈದ ಬಳಿಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಈ ಮಧ್ಯೆ ಆವಿ ಎಂಬಲ್ಲಿ ಐದು ಮನೆಗಳಿಂದ ಸೈಕಲ್ ಕಳವುಗೈದ ಬಗ್ಗೆ ಮತ್ತೆ ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಸಿಸಿ ಟಿವಿ ದೃಶ್ಯಗಳನ್ನು ತನಿಖೆಗೊಳಪಡಿಸಿ ಅಪ್ರಾಪ್ತರಾದ ಐದು ಮಕ್ಕಳನ್ನು ಸೆರೆ ಹಿಡಿದಿದ್ದಾರೆ. ಕಳವುಗೈದ ಸೈಕಲ್ಗಳನ್ನು ಗುಜರಿ ಅಂಗಡಿಗೆ 200 ರೂ.ನಂತೆ ಮಾರಾಟ ಮಾಡಿರುವುದಾಗಿ ತಿಳಿದು ಬಂತು. ಗುಜರಿ ಅಂಗಡಿಯಿಂದ ಇವರು ಕಳವುಗೈದ 8 ಸೈಕಲ್ಗಳನ್ನು ಪತ್ತೆಹಚ್ಚಲಾಗಿದೆ. ಇದನ್ನು ಬಳಿಕ ಮಾಲಕರಿಗೆ ಪೊಲೀಸರು ಹಸ್ತಾಂತರಿಸಿದರು.
ಅಪ್ರಾಪ್ತರಾದ ಕಾರಣ ಸೈಕಲ್ ಕಳವುಗೊಂಡ ಮನೆಯವರು ಕೇಸು ಮುಂದುವರಿಸಲು ಆಗ್ರಹಿಸದ ಕಾರಣ ಮಕ್ಕಳನ್ನು ಕೇಸು ದಾಖಲಿಸದೆ ಬಿಟ್ಟುಕೊಡಲಾಗಿದೆ. ಬಳಿಕ ಮಕ್ಕಳಿಗೆ ಕಳವಿನ ಬಗ್ಗೆ ತಿಳಿಸಿ ಹೇಳಲಾಗಿದೆ. ಕಳೆದ ಕೆಲವು ದಿನಗಳಿಂದ ಹೊಸದುರ್ಗ ಠಾಣೆ ಪರಿಸರದಲ್ಲಿ ಸೈಕಲ್ ಕಳವು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ ಅಜಿತ್ ಕುಮಾರ್ ಪಿ.ಯವರ ನೇತೃತ್ವದಲ್ಲಿ ಎಸ್.ಐ. ಅನ್ಸಾರ್ ಮೇಲ್ನೋಟದಲ್ಲಿ ತನಿಖೆ ನಡೆಸಲಾಗಿತ್ತು.