ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ- ಡಾ| ಚೂಂತಾರು
ಹೊಸಂಗಡಿ: ಬಾಯಿಯೇ ದೇಹದ ಆರೋಗ್ಯದ ಹೆಬ್ಬಾಗಿಲು. ಬಾಯಿಯಲ್ಲಿ ಆರೋಗ್ಯವಂತ ಹಲ್ಲುಗಳು ಇದ್ದಲ್ಲಿ ನಾವು ತಿನ್ನುವ ಆಹಾರ ಚೆನ್ನಾಗಿ ಜೀರ್ಣವಾಗಿ ನಮ್ಮ ದೈಹಿಕ ಆರೋಗ್ಯ ವೃಧ್ದಿಸುತ್ತದೆ. ಬಾಯಿಯ ಆರೋಗ್ಯ ಕೆಟ್ಟಲ್ಲಿ ದೇಹದ ಇತರ ಅಂಗಗಳ ಆರೋಗ್ಯವು ಕೆಡುತ್ತದೆ. ತಿನ್ನುವ ಆರೋಗ್ಯ ದೇಹಕ್ಕೆ ಸೇರಿಕೊಂಡು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಲು ಆರೋಗ್ಯವಂತ ಬಾಯಿ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸುರಕ್ಷಾ ದಂತ ಚಿಕಿತ್ಸಾಲಯದ ಡಾ| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು. ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ಮಂಜೇಶ್ವರದ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಬಾಯಿಯ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ ದಂತ ಚಿಕಿತ್ಸಾಲಯಕ್ಕೆ ಬಂದ ರೋಗಿಗಳಿಗೆ ಉಚಿತ ಬಾಯಿ ತಪಾಸಣೆ ಮಾಡಲಾಯಿತು. ಡಾ| ರಾಜಶ್ರೀ ಮೋಹನ್, ಬೇರು ನಾಳ ತಜ್ಞ ಡಾ| ಶರತ್ ಪಾರೆ, ಚಿಕಿತ್ಸಾಲದ ಸಹಾಯಕಿಯರಾದ ಕುಮಾರಿ ರಮ್ಯ, ಚೈತ್ರ, ಸುಷ್ಮಾ ಮತ್ತು ಜಯಶ್ರೀ ಕೋಟ್ಯಾನ್ ಉಪಸ್ಥಿತರಿದ್ದರು. ದಂತ ಆರೋಗ್ಯ ಮಾರ್ಗದರ್ಶನ ಪುಸ್ತಕವನ್ನು ಸುರಕ್ಷ ದಂತ ಚಿಕಿತ್ಸಾಲಯಕ್ಕೆ ಬೇಟಿ ನೀಡಿದ ರೋಗಿಗಳಿಗೆ ಉಚಿತವಾಗಿ ಹಂಚಲಾಯಿತು.