ಮಂಜೇಶ್ವರದ ಸಮಸ್ಯೆಗಳಿಗೆ ಸ್ಪಂದಿಸದೆ ವಿದೇಶ ಪ್ರಯಾಣಗೈಯ್ಯುವ ಶಾಸಕರ ಉದ್ದೇಶ ಬಹಿರಂಗಪಡಿಸಬೇಕು- ಬಿಜೆಪಿ
ಮಂಜೇಶ್ವರ: ಮಂಜೇಶ್ವರದ ಜನತೆ ಅಗತ್ಯ ಬೇಡಿಕೆಗಳಿಗೆ ಶಾಸಕರನ್ನು ಭೇಟಿಯಾಗಲು ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಪ್ರತೀ ತಿಂಗಳು ಕನಿಷ್ಠ ೧೦ ದಿನಗಳ ಕಾಲ ಮಂಜೇಶ್ವರ ಶಾಸಕರು ವಿದೇಶದಲ್ಲಿದ್ದು, ಇದು ಯಾವ ಉದ್ದೇಶಕ್ಕಾಗಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರಶ್ನಿಸಿದೆ. ಮಂಡಲದಲ್ಲಿ ಅನೇಕ ಸಮಸ್ಯೆಗಳಿದ್ದರೂ ಅದರ ಪರಿಹಾರಕ್ಕೆ ಗಮನ ನೀಡದೆ ವಿದೇಶಕ್ಕೆ ಸಂಚರಿಸುತ್ತಿರುವ ಶಾಸಕರ ಪ್ರಯಾಣದ ಉದ್ದೇಶ ಸ್ಪಷ್ಟಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಮಂಜೇಶ್ವರ ಮಂಡಲ ಪ್ರಮುಖರ ಸಭೆ ಪ್ರೇರಣಾದಲ್ಲಿ ಜರಗಿತು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ವಿಜಯ ರೈ, ಮುಖಂಡರಾದ ಎ.ಕೆ. ಕಯ್ಯಾರ್, ಮಣಿಕಂಠ ರೈ, ಸದಾಶಿವ ಚೇರಾಲ್, ಸುಬ್ರಹ್ಮಣ್ಯ ಭಟ್, ಹರೀಶ್ಚಂದ್ರ ಎಂ, ಕೀರ್ತಿ ಭಟ್, ತುಳಸಿ ಕುಮಾರಿ, ಲೋಕೇಶ್ ನೋಂಡಾ, ವಿಘ್ನೇಶ್ವರ, ಭಾಸ್ಕರ್ ಪೊಯ್ಯೆ ಉಪಸ್ಥಿತರಿದ್ದರು. ಕೆ.ವಿ. ಭಟ್ ಸ್ವಾಗತಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.