ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಧರ್ಮತ್ತಡ್ಕ ಶಾಲೆಯಲ್ಲಿ ಸ್ಪರ್ಧೆ ಆರಂಭ
ಪೆರ್ಮುದೆ: ಮಂಜೇಶ್ವರ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವ ಇಂದಿನಿಂದ ೧೦ರ ತನಕ ಧರ್ಮತ್ತಡ್ಕ ಎಸ್ಡಿಪಿಎಎಚ್ಎಸ್ಎಸ್, ಎಯುಪಿಎಸ್ ಶಾಲೆಯಲ್ಲಿ ನಡೆಯಲಿದೆ.
ನಾಳೆ ಬೆಳಿಗ್ಗೆ ಎನ್. ಶಾರದ ಅಮ್ಮ ಧ್ವಜಾರೋಹಣಗೈಯ್ಯುವರು. ೧೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಡಿ. ಅಧ್ಯಕ್ಷತೆ ವಹಿಸುವರು. ಎಇಒ ಜಿತೇಂದ್ರ ಎಸ್.ಎಚ್. ಪ್ರಸ್ತಾಪಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿರುವರು. ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಡಿಡಿಇ ನಂದಿ ಕೇಶನ್ ಎನ್, ಅಬ್ದುಲ್ ಮಜೀದ್ ಎಂ.ಎಚ್., ಚಂದ್ರಾವತಿ ಎಂ. ಸಹಿತ ಹಲವರು ಉಪಸ್ಥಿತರಿರುವರು. ೧೦ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸುವರು. ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ ಕೆ., ಪುತ್ತಿಗೆ ಪಂ. ಉಪಾಧ್ಯಕ್ಷೆ ಜಯಂತಿ, ಪಾಲಾಕ್ಷ ರೈ, ಅನಿತ ಎಂ, ಕೇಶವ ಎಸ್.ಆರ್. ಸಹಿತ ಹಲವರು ಭಾಗವಹಿಸುವರು.
ಇಂದು ಬೆಳಿಗ್ಗೆ ವೇದಿಕೆ ಮೂರ ರಲ್ಲಿ ಅರಬಿಕ್ ಸ್ಪರ್ಧೆಗಳು ಆರಂಭ ಗೊಂಡಿತು. ೧೦ ಗಂಟೆಗೆ ಖುರಾನ್ ಪಾರಾಯಣ ಆರಂಭಗೊಂಡಿತು. ವೇದಿಕೆ ನಾಲ್ಕರಲ್ಲಿ ಕನ್ನಡ ಕಥೆ, ಚಿತ್ರ ರಚನೆ ಮೊದಲಾದ ಸ್ಪರ್ಧೆಗಳು ಆರಂಭಗೊಂಡಿತು. ೧೨೦ಕ್ಕೂ ಅಧಿಕ ಶಾಲೆಗಳಿಂದ ಸುಮಾರು ೪೦೦೦ಕ್ಕೂ ಅಧಿಕ ಪ್ರತಿಭೆಗಳು ೧೦ರಷ್ಟು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವರು.