ರಾಜ್ಯದಲ್ಲಿ ಬೀಸತೊಡಗಿದೆ ಭಾರೀ ಉಷ್ಣ ಅಲೆ : ಎರಡು ದಿನಗಳಲ್ಲಾಗಿ ಮೂವರು ಮೃತ್ಯು

ಕಾಸರಗೋಡು: ರಾಜ್ಯದಲ್ಲಿ ಬಿಸಿಲ ಝಳ ದಿನೇ ದಿನೇ ತಾರಕಕ್ಕೇರ ತೊಡಗಿದ್ದು, ಇದರ ಜೊತೆಯಲ್ಲಿ ತೀವ್ರ ಉಷ್ಣ ಅಲೆಯೂ ಬೀಸತೊಡಗಿದೆ. ಇದರ ಪರಿಣಾಮ ಕಳೆದ ಎರಡು ದಿನಗಳಲ್ಲಾಗಿ ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತದೇಹಗಳ  ಮರಣೋತ್ತರ ಪರೀಕ್ಷಾ ವರದಿಯಲ್ಲಿ  ಬೀಸಿಲ ಝಳವೇ ಈ ಮೂವರ ಸಾವಿಗೆ ಕಾರಣವಾಗಿದೆಯೆಂದು  ಸ್ಪಷ್ಟ ಪಡಿಸಲಾಗಿದೆ.

ಪಾಲ್ಘಾಟ್ ಜಿಲ್ಲೆಯ ಎಲಿಪುಳ ಪಳ್ಳಿತ್ತರ ಪಾರಾಮೇಡ್ ನಿವಾಸಿ ಲಕ್ಷ್ಮಿಯಮ್ಮ (89), ಮಾಹಿ ಪಂದಕ್ಕಲ್ ಪಂತೋಟಿಕಾಟಿಲ್ ಯು.ಎನ್. ವಿಶ್ವನಾಥನ್ (53) ಮತ್ತು ಇಡುಕ್ಕಿ ಕಾಳಿಯಾರ್ ಮುಲ್ಲೇರಿಂಗಾಡ್ ಮಂಬರಂ ಪುತ್ತನ್‌ಪುರಕ್ಕಲ್ ಸುರೇಂದ್ರನ್ (73) ಸಾವನ್ನಪ್ಪಿದ ವ್ಯಕ್ತಿಗಳು. ಈ ಪೈಕಿ ಲಕ್ಷ್ಮಿಯಮ್ಮ ಮೊನ್ನೆ ಮನೆಯಿಂದ ಹೊರಹೋದವರು ಬಳಿಕ ಹಿಂತಿರುಗಲಿಲ್ಲ. ಅವರಿಗಾಗಿ ಮನೆಯವರು ಶೋಧ ನಡೆಸಿದಾಗ ಮನೆ ಪಕ್ಕದ ಕಾಲುವೆಯ ಬಳಿ ಬಿಸಿಲ ತಾಪಕ್ಕೆ ಕುಸಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಶ್ವನಾಥನ್ ಬಾವಿ  ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವೇಳೆ ತೀವ್ರ ಬಿಸಿಲ ತಾಪ ಸಹಿಸಲಾರದೆ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿ ಸಲು ಸಾಧ್ಯವಾಗಲಿಲ್ಲ. ಸುರೇಂದ್ರನ್ ಅವರು ಬಿಸಿಲ ಝಳ ಸಹಿಸಲಾರದೆ ಎಪ್ರಿಲ್ ೧೦ರಂದು ಮನೆ ಬಳಿಯ ರಸ್ತೆಯಲ್ಲಿ ಕುಸಿದುಬಿದ್ದಿದ್ದಾರೆ. ಬಳಿಕ ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿ ತಾದರೂ ಅದು ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟಿದ್ದಾರೆ.

ರಾಜ್ಯದ ಎಲ್ಲೆಡೆಗಳಲ್ಲಿ ತೀವ್ರ ಉಷ್ಣ ಅಲೆ ಬೀಸತೊಡಗಿದೆ.  ಅತೀ ಹೆಚ್ಚು ಎಂಬಂತೆ ಪಾಲ್ಘಾಟ್ ಜಿಲ್ಲೆಯಲ್ಲಿ ತಾಪಮಾನ ಮಟ್ಟ ೪೧.೮ ಡಿಗ್ರಿ ಸೆಲ್ಶಿಯಸ್‌ಗೇರಿದೆ. ಇದೊಂದು ದಾಖಲೆಯಾಗಿದೆ. ಮುಂದೆ ಅದು ೬೦ ಡಿಗ್ರಿ ಸೆಲ್ಶಿಯಸ್‌ಗೇರುವ ಸಾಧ್ಯತೆ ಯೂ ಇದೆ.  ರಾಜ್ಯದಲ್ಲಿ ಉಷ್ಣ ಅಲೆ ಬೀಸುವಿಕೆ ಮುಂದಿನ ಏಳು ದಿನಗಳ ತನಕ ಮುಂದುವರಿಯಲಿದೆಯೆಂದೂ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ತಾಪಮಾನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ರಾಜ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಒಂದು ವಾರ ರಜೆ ಘೋಷಿಸಿದೆ. ರಾಜ್ಯದಲ್ಲಿ ತೀವ್ರ ಉಷ್ಣ ಅಲೆ ತಲೆಯೆತ್ತಿರುವುದನ್ನು ಪರಿಗಣಿಸಿ ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯು ಉನ್ನತ ಮಟ್ಟದ ಅಧಿ ಕಾರಿಗಳ ತುರ್ತು ಸಭೆ ಸೇರಿ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದ್ದಾರೆ. ಮಾತ್ರವಲ್ಲ ರಾಜ್ಯಾದ್ಯಂತವಾಗಿ ಆರೋಗ್ಯ ಇಲಾಖೆ ತೀವ್ರ ಜಾಗ್ರತಾ ನಿರ್ದೇಶ ವನ್ನೂ ನೀಡಿದೆ. ಅಂಗನವಾಡಿಗಳಿಗೆ ಒಂದು ವಾರ ರಜೆ ಘೋಷಿಸಿರುವು ದರಿಂದಾಗಿ ಅಲ್ಲಿ ಕಲಿಯುತ್ತಿರುವ ಮಕ್ಕಳಿಗಿರುವ ಪೌಷ್ಠಿಕಾಹಾರಗಳನ್ನು ಆಯಾ ಮಕ್ಕಳ  ಮನೆಗಳಿಗೆ ನೇರವಾಗಿ ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

ತಾಪಮಾನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡೂ ಸೇರಿ ರಾಜ್ಯದ ೧೧ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ತಾಪಮಾನ ಮಟ್ಟ ೩೬ ಡಿಗ್ರಿ ಸೆಲ್ಶಿಯಸ್‌ಗೇರಿದೆ.  ಸೆಖೆ ಹೆಚ್ಚಾಗುತ್ತಿರುವುದಕ್ಕೆ ಹೊಂದಿ ಕೊಂಡು ಇನ್ನೊಂದೆಡೆ ರಾಜ್ಯದಲ್ಲಿ ದೈನಂದಿನ ವಿದ್ಯುತ್ ಬಳಕೆ ೧೧ ಕೋಟಿ ಯೂನಿಟ್ ಮೀರಿದೆ. 

Leave a Reply

Your email address will not be published. Required fields are marked *

You cannot copy content of this page