ಸಿನಿಮಾ ನಟಿ ಆರೋಪಿ: ನಟ ಮುಕೇಶ್ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ; ತಿರಸ್ಕರಿಸಿದ ಸಿಪಿಎಂ
ತಿರುವನಂತಪುರ: ಚಲನಚಿತ್ರ ನಟಿಯರ ವಿರುದ್ಧ ಲೈಂಗಿಕ ದೌರ್ಜನ್ಯಗಳ ಕುರಿತು ನ್ಯಾ. ಕೆ. ಹೇಮ ಸಮಿತಿ ವರದಿ ಸಲ್ಲಿಸಿದ ಬಳಿಕ ಮಲೆಯಾಳ ಚಲನಚಿತ್ರರಂಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಮೇಲೆ ನಡೆದ ಲೈಂಗಿಕ ಶೋಷಣೆ, ದೌರ್ಜನ್ಯ ಯತ್ನ ಕುರಿತು ಹಲವರು ನಟಿಯರು ದೂರುಗಳೊಂದಿಗೆ ಮುಂದೆ ಬಂದಿದ್ದಾರೆ. ಇದೇ ವೇಳೆ ನಟಿಯೋರ್ವೆಯ ಆರೋಪದಂತೆ ನಟನೂ ಶಾಸಕನೂ ಆಗಿರುವ ಮುಕೇಶ್ ವಿರುದ್ಧ ವಿಪಕ್ಷಗಳು ಪ್ರತಿಭಟನೆಗಿಳಿದಿದ್ದು, ಮುಕೇಶ್ ರಾಜೀನಾಮೆ ನೀಡಬೇಕೆಂಬ ಬೇಡಿಕೆ ಮುಂದಿರಿಸಿವೆ. ಮುಕೇಶ್ರ ಕೊಲ್ಲಂ ಪಟ್ಟತ್ತಾನದ ಮನೆಗೆ ನಿನ್ನೆ ಮಹಿಳಾ ಕಾಂಗ್ರೆಸ್ ಹಾಗೂ ಮಹಿಳಾ ಮೋರ್ಛಾ ನೇತೃತ್ವದಲ್ಲಿ ಮಾರ್ಚ್ ನಡೆಯಿತು. ನಟ ಮುಕೇಶ್ ಶಾರೀರಿಕವಾಗಿ ಕಿರುಕುಳ ನೀಡಿದ್ದರೆಂದು ನಟಿಯೋರ್ವೆ ಆರೋಪಿಸಿದ್ದಾರೆ. ಸಿನಿಮಾವೊಂದರ ಚಿತ್ರೀಕರಣ ಮಧ್ಯೆ ಹೋಟೆಲ್ನಲ್ಲಿ ಮುಖೇಶ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಅದನ್ನು ವಿರೋಧಿಸಿದ ದ್ವೇಷದಿಂದ ‘ಅಮ್ಮ’ ಸಂಘಟನೆಯ ಸದಸ್ಯತ್ವಕ್ಕೆ ಸಲ್ಲಿಸಿದ ಅರ್ಜಿಯನ್ನು ಮುಕೇಶ್ ಮಧ್ಯಸ್ಥಿಕೆ ವಹಿಸಿ ತಿರಸ್ಕರಿಸಿರುವುದಾಗಿ ನಟಿ ಆರೋಪಿಸಿದ್ದಾರೆ. ಮುಕೇಶ್ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿ ರಂಗಕ್ಕೆ ಬಂದಿವೆ. ಆದರೆ ಮುಕೇಶ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲವೆಂಬ ನಿಲುವನ್ನು ಸಿಪಿಎಂ ಹೊಂದಿದೆ. ಇದೇ ರೀತಿಯ ಆರೋಪ ಕೇಳಿ ಬಂದಾಗ ಯುಡಿಎಫ್ ಶಾಸಕರು ರಾಜೀನಾಮೆ ನೀಡಿಲ್ಲವೆಂದು ಸಿಪಿಎಂ ತಿಳಿಸಿದೆ. ಇದೇ ವೇಳೆ ಬಂಗಾಳಿ ನಟಿಯೋರ್ವೆಯ ದೂರಿನಂತೆ ನಿರ್ದೇ ಶಕನೂ ಚಲನಚಿತ್ರ ಅಕಾಡೆಮಿಯ ಮಾಜಿ ಚೆಯರ್ ಮೆನ್ ರಂಜಿತ್ ಕಾನೂನು ಕ್ರಮಗಳಿಗೆ ಮುಂದಾಗಿದ್ದಾರೆ.