ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ತುಂಬಿಕೊಂಡ ತ್ಯಾಜ್ಯ : ಕಿಡಿಗೇಡಿಗಳ ಉಪಟಳದಿಂದ ಕಾಲ್ನಡೆ ಪ್ರಯಾಣಿಕರಿಗೆ ಸಮಸ್ಯೆ
ಮಂಜೇಶ್ವರ: ತಲಪಾಡಿಯಿಂದ ಚೆಂಗಳ ತನಕ ಹೆದ್ದಾರಿಯನ್ನು ಸುಂದರವಾಗಿ ಅಭಿವೃದ್ಧಿಗೊಳಿಸುತ್ತಿರುವ ಮಧ್ಯೆ ಕಿಡಿಗೇಡಿಗಳು ತ್ಯಾಜ್ಯಗಳನ್ನು ರಸ್ತೆ ಬದಿ ಉಪೇಕ್ಷಿಸಿ ದುರ್ವಾಸನೆಗೆ ಕಾರ ಣವಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ತಲಪಾಡಿಯಿಂದ ಕಾಸರಗೋಡು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯ ಕಿರು ಸಂಕದ ಸಮೀಪದಲ್ಲಿ ಭಾರೀ ಪ್ರಮಾಣದ ವಿವಿಧ ರೀತಿಯ ತ್ಯಾಜ್ಯಗಳು ರಾಶಿ ಬಿದ್ದಿರುವುದು ಕಂಡು ಬರುತ್ತಿದೆ. ತ್ಯಾಜ್ಯವನ್ನು ಕಾಲುದಾರಿ ಯಲ್ಲಿ ಉಪೇಕ್ಷಿಸಲಾಗುತ್ತಿದ್ದು, ಇದು ಜನರ ಸಂಚಾರಕ್ಕೆ ಸಂಕಷ್ಟ ಉಂಟುಮಾಡುತ್ತಿದೆ. ಸಮಾರಂಭಗಳಲ್ಲಿ ಬಾಕಿ ಉಳಿದ ಪ್ಲೇಟ್‌ಗಳು, ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯಗಳನ್ನು ಇಲ್ಲಿ ತಂದು ಉಪೇಕ್ಷಿಸಲಾಗುತ್ತಿದೆ. ಇದರಿಂದಾಗಿ ಕಾಲ್ನಡೆ ಪ್ರಯಾಣಿಕರು ಕಾಲುದಾರಿಯನ್ನು ಬಿಟ್ಟು ರಸ್ತೆಯಲ್ಲೇ ನಡೆಯಬೇಕಾದ ಅವಸ್ಥೆಯಿದೆ. ಇದು ಅಪಘಾತಕ್ಕೂ ಕಾರಣವಾಗಲಿದೆ.
ಸರ್ವೀಸ್ ರಸ್ತೆ ಪಕ್ಕದಲ್ಲೇ ತ್ಯಾಜ್ಯವನ್ನು ಉಪೇಕ್ಷಿಸಿ ರಸ್ತೆಯನ್ನು ಶೋಚನೀಯಗೊಳಿಸುವ ಸ್ಥಿತಿಯನ್ನು ಕೊನೆಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.