ಹೊಳೆಗೆ ಬಿದ್ದು ನಾಪತ್ತೆಯಾದ ಟೆಲಿಫಿಲ್ಮ್ ನಟನ ಮೃತದೇಹ ಪತ್ತೆ
ಕಾಸರಗೋಡು: ಚಂದ್ರಗಿರಿ ಹೊಳೆಯಲ್ಲಿ ನಾಪತ್ತೆಯಾಗಿದ್ದ ಚೆಂಗಳ ಪಾಣಾಳಂ ನಿವಾಸಿ ಅಬ್ದುಲ್ ಮಜೀರ್ (೫೨)ರ ಮೃತದೇಹ ನಿನ್ನೆ ಮಧ್ಯಾಹ್ನ ಪೆರುಂಬಳ ಹೊಳೆ ಬದಿ ಪತ್ತೆಯಾಗಿದೆ. ಅಬ್ದುಲ್ ಮಜೀದ್ ಮೊನ್ನೆ ರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಸಮೀಪದ ಹೊಳೆ ಬದಿಗೆ ಹೋಗಿದ್ದರು. ಈ ವೇಳೆ ಅಬ್ದುಲ್ ಮಜೀದ್ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ವಿಷಯ ತಿಳಿದ ಕಾಸರಗೋಡು ಅಗ್ನಿಶಾಮಕದಳ ಮತ್ತು ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದ್ದರು.
ಈ ಮಧ್ಯೆ ನಿನ್ನೆ ಮಧ್ಯಾಹ್ನ ಮೃತದೇಹ ಪೆರುಂಬಳದಲ್ಲಿ ಹೊಳೆ ಬದಿ ಪತ್ತೆಯಾಗಿದೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.
ಮೃತ ಅಬ್ದುಲ್ ಮಜೀದ್ ಹಲವು ಟೆಲಿಫಿಲ್ಮ್ ನಲ್ಲಿ ಅಭಿನಯಿಸಿದ್ದರು. ಮಾತ್ರವಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಉಮೇದ್ವಾರರಾಗಿ ಸ್ಪರ್ಧಿಸಿದ್ದರು. ನಂತರ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದಲೂ ಬಿಎಸ್‌ಪಿ ಉಮೇದ್ವಾರರಾಗಿ ಸ್ಪರ್ಧಿಸಿದ್ದರು. ದಿ| ಹಸೈನಾರ್ ಹಾಜಿ- ಮರಿಯುಮ್ಮ ದಂಪತಿ ಪುತ್ರನಾಗಿರುವ ಮೃತ ಅಬ್ದುಲ್ ಮಜೀದ್, ಪತ್ನಿ ನಸೀಮಾ, ಮಕ್ಕಳಾದ ಕಿಳರ್ಷಾ, ಮುಸಕಲೀಂ, ನಾಮಿಯಾ, ಸಹೋದರ ಸಹೋದರಿಯರಾದ ಅಬೂಬಕರ್ ಸಿದ್ದೀಕ್, ಖದೀಜಾ, ಆಯಿಷಾ, ಸಫಿಯಾ, ಹಾಜಿರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.