ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ೧೩ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಿ.ಎಫ್ ಕಾರ್ಯಕರ್ತ ಎನ್‌ಐಎ ಬಲೆಗೆ

ಕಣ್ಣೂರು: ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ನಿಂದನೆ ನಡೆಸಲಾಗಿದೆಯೆಂದು ಆರೋಪಿಸಿ ಕೋಮು  ದ್ವೇಷದಿಂದ ಕಾಲೇಜು ಪ್ರಾಧ್ಯಾಪಕ ಟಿ.ಜೆ.ಜೋಸೆಫ್‌ರ ಕೈ ತುಂಡರಿಸಿದ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಕಳೆದ ೧೩ ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದ ಪೋಪುಲರ್ ಫ್ರೆಂಟ್ (ಪಿಎಫ್) ಕಾರ್ಯಕರ್ತ ಕೊಚ್ಚಿ ಅಶಮನ್ನೂರ್ ನುಲೇಲಿ ಮುಂಡಶ್ಶೇರಿ ನಿವಾಸಿ ಸವಾದ್ (೩೮)   ಕೊನೆಗೂ ಕಣ್ಣೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಲೆಗೆ ಬಿದ್ದಿದ್ದಾನೆ. ಕಣ್ಣೂರಿನ ಮನೆಯೊಂದರಲ್ಲಿ ತಲೆಮರೆಸಿಕೊಂಡು   ಜೀವಿಸುತ್ತಿದ್ದನೆಂಬ ಬಗ್ಗೆ   ಖಚಿತ ಮಾಹಿತಿ ಲಭಿಸಿದ ಎನ್‌ಐಎ ಇಂದು ಬೆಳಿಗ್ಗೆ ಆ  ಮನೆಗೆ ಸುತ್ತುವರಿದು ಆತನನ್ನು ವಶಪಡಿಸಿಕೊಂಡು ನಂತರ ಕೊಚ್ಚಿಗೆ ಸಾಗಿಸಿದೆ.

ಪ್ರಾಧ್ಯಾಪಕನ ಕೈತುಂಡರಿಸಿದ ಘಟನೆ ನಡೆದ ೨೦೧೦ ಜುಲೈ ೪ರಿಂದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದನೆಂದು ಈ ಪ್ರಕರಣದ ಮೊದಲ ತನಿಖೆ ನಡೆಸಿದ ಕ್ರೈಂಬ್ರಾಂಚ್ ಪೊಲೀಸರು ತಿಳಿಸಿದ್ದರು.  ಇದು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಬಳಿಕ ತನಿಖೆಯನ್ನು ೨೦೧೧ ಮಾರ್ಚ್‌ನಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಘಟನೆ ನಡೆದು ೧೩ ವರ್ಷ ಕಳೆದರೂ ಆರೋಪಿ ಸವಾದ್‌ನನ್ನು ಕನಿಷ್ಠ ಪತ್ತೆಹಚ್ಚಲೂ ಸಾಧ್ಯವಾಗಿರಲಿಲ್ಲ. ಅದರಿಂದಾಗಿ ಎನ್‌ಐಎ ಲುಕೌಟ್ ನೋಟೀಸು ಜ್ಯಾರಿಗೊಳಿಸಿತ್ತು. ಮಾತ್ರವಲ್ಲದೆ  ಆತನ ಕುರಿತು ಮಾಹಿತಿ ನೀಡುವವರಿಗೆ  ಮೊದಲು ೪ ಲಕ್ಷ ರೂ. ಪಾರಿತೋಷಕ ಘೋಷಿಸಿತ್ತು.  ಅದಾಗಿಯೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಪಾರಿತೋಷಕ ಮೊತ್ತವನ್ನು ಎನ್‌ಐಎ ಬಳಿಕ ೧೦ ಲಕ್ಷ ರೂ.ಗೇರಿಸಿತ್ತು. ಈ ಪ್ರಕರಣದಲ್ಲಿ ಒಟ್ಟು ೫೪ ಮಂದಿ ಆರೋಪಿಗಳಿದ್ದು, ಆ ಪೈಕಿ  ಇತರ ಮುಖ್ಯ ಆರೋಪಿಗಳಾಗಿರುವ ಸಜಿನ್, ಎನ್.ಕೆ. ನಾಸರ್ ಮತ್ತು ನಜೀಬ್ ಎಂಬಿವರಿಗೆ ಕಳೆದ ವರ್ಷ  ಜುಲೈ ೧೩ರಂದು  ಕೊಚ್ಚಿಯ ವಿಶೇಷ ಎನ್‌ಐಎ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿತ್ತು. ಮಾತ್ರವಲ್ಲದೆ ಇತರ ಮೂವರು ಆರೋಪಿಗಳಾದ ನೌಷಾದ್, ಮೊಯ್ದೀನ್ ಕುಂಞಿ ಮತ್ತು ಅಯೂಬ್ ಎಂಬಿವರಿಗೆ ತಲಾ ೩ ವರ್ಷಗಳಂತೆ ಸಜೆ ಹಾಗೂ ಜುಲ್ಮಾನೆ ವಿಧಿಸಿತ್ತು. ೧೮ ಮಂದಿ ಆರೋಪಿಗಳ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ ತಲೆಮರೆಸಿಕೊಂಡಿರುವ ಒಂದನೇ ಆರೋಪಿ ವಿದೇಶಕ್ಕೆ ಪರಾರಿಯಾಗಿರುವ ಶಂಕೆಯಿಂದಾಗಿ ಭಾರತೀಯ ಬೇಹು ಗಾರಿಕಾ ಸಂಸ್ಥೆಯಾದ ‘ರಾ’ದ ಸಹಾ ಯದಿಂದ ಪಾಕಿಸ್ತಾನ, ದುಬೈ, ಅಪ ಘಾನಿಸ್ಥಾನ, ನೇಪಾಳ ಮತ್ತು ಮಲೇ ಶಿಯಾವನ್ನೂ ಕೇಂದ್ರೀಕರಿಸಿ ಎನ್‌ಐಎ ತನಿಖೆ ನಡೆಸಿತ್ತು. ಆದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

Leave a Reply

Your email address will not be published. Required fields are marked *

You cannot copy content of this page