ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ: ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಸೇರಿದಂತೆ ೨೯ ಮಂದಿ ಆರೋಪಿಗಳು

ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಕೋಲಾಹಲವೆಬ್ಬಿಸಿರುವ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ)ನ್ನು  ಈ ಪ್ರಕರಣದ ತನಿಖೆ ನಡೆಸುತ್ತಿರುವ ಕಣ್ಣೂರು ಕ್ರೈಂಬ್ರಾಂಚ್ ಪೊಲೀಸರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಈ ವಂಚನೆ  ಬಗ್ಗೆ ಒಟ್ಟು ೨೬೩ ದೂರುಗಳು ಲಭಿಸಿದ್ದು, ಆ ಪೈಕಿ ದಾಖಲಿಸಿಕೊಳ್ಳಲಾಗಿರುವ ೧೫ ಪ್ರಕರಣಗಳ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮುಸ್ಲಿಂ ಲೀಗ್ ನೇತಾರ ಹಾಗೂ ಮಂಜೇಶ್ವರ ಮಾಜಿ ಶಾಸಕ ಹಾಗೂ ಫ್ಯಾಶನ್ ಗೋಲ್ಡ್‌ನ ಚೆಯರ್‌ಮೆನ್ ಆಗಿದ್ದ   ಎಂ.ಸಿ. ಖಮರುದ್ದೀನ್ ಈ ಪ್ರಕರಣದ ಒಂದನೇ ಆರೋಪಿಯಾಗಿ ಹೆಸರಿಸಲಾಗಿದೆ. ಮೆನೇಜಿಂಗ್ ಡೈರೆಕ್ಟರ್  ಪೂಕೋಯ ತಂಙಳ್‌ರನ್ನು ಎರಡನೇ ಆರೋಪಿ ಹಾಗೂ ಈ ಸಂಸ್ಥೆಯ ಇತರ ಡೈರೆಕ್ಟರ್‌ಗಳೂ ಸೇರಿದಂತೆ ಒಟ್ಟು ೨೯ ಮಂದಿಯನ್ನು ಈ ಪ್ರಕರಣದಲ್ಲಿ ಆರೋಪಿಗಳಾನ್ನಾಗಿ ಒಳಪಡಿಸಲಾಗಿದೆ. ಬಡ್ಸ್ ಆಕ್ಟ್, ಠೇವಣಿ ಹಿತಾಸಕ್ತಿ ಸಂರಕ್ಷಣಾ  ಕಾನೂನು, ಐಪಿಸಿಯ ೪೦೨, ೪೦೬ ಮತ್ತು ೪೦೯ ಎಂಬೀ ಸೆಕ್ಷನ್‌ಗಳ ಪ್ರಕಾರದ ಆರೋಪಗಳನ್ನು  ಚಾರ್ಜ್ ಶೀಟ್‌ನಲ್ಲಿ ಆರೋಪಿಗಳ ವಿರುದ್ಧ ಹೊರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲು ಪತ್ರಗಳ ಫೋರೆನ್ಸಿಕ್ ಪರೀಕ್ಷೆಗಳನ್ನು ಪೂರ್ತೀಕರಿಸಿದ ಬಳಿಕವಷ್ಟೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹೀಗೆ ಒಟ್ಟು ೩೫ ಪ್ರಕರಣಗಳ  ಚಾರ್ಜ್ ಶೀಟ್ ಗಳನ್ನು ಈಗಾಗಲೇ ತಯಾರಿಸಲಾ ಗಿದೆ. ಉಳಿದ ಚಾರ್ಜ್ ಶೀಟ್‌ಗಳನ್ನು ಶೀಘ್ರವೇ ನ್ಯಾಯಾ ಲಯಕ್ಕೆ ಸಲ್ಲಿಸಲಾಗುವುದೆಂದು ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಾಸರ ಗೋಡು, ಚೆರ್ವತ್ತೂರು, ಕಣ್ಣೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು ೧೬೮ ಪ್ರಕರಣಗಳು ದಾಖಲುಗೊಂಡಿದೆ.  ಮಾತ್ರವಲ್ಲ ಈ ಪ್ರಕರಣದ ಪ್ರಧಾನ ಆರೋಪಿಗಳ ಆಸ್ತಿಪಾಸ್ತಿಗಳನ್ನೂ ನ್ಯಾಯಾಲಯದ ಅನುಮತಿ ಪಡೆದು  ಕ್ರೈಂ ಬ್ರಾಂಚ್ ಪೊಲೀಸರು ಈಗಾಗಲೇ ಮುಟ್ಟುಗೋಲು ಹಾಕಿದ್ದಾರೆ.

Leave a Reply

Your email address will not be published. Required fields are marked *

You cannot copy content of this page