ವಿದ್ಯುತ್ ಬೆಳಕಿಲ್ಲದೆ ಕತ್ತಲೆಯಲ್ಲಿ ಐದು ದಿನಗಳನ್ನು ಕಳೆದ ಬಡ ಕುಟುಂಬ: ಕೆಎಸ್ಇಬಿ ಕಚೇರಿ ಮುಂದೆ ಪ್ರತಿಭಟನೆ
ಬದಿಯಡ್ಕ: ಐದು ದಿನಗಳ ಕಾಲ ವಿದ್ಯುತ್ ಬೆಳಕಿಲ್ಲದೆ ಬಡಕುಟುಂಬ ಬಾಡಿಗೆ ಮನೆಯಲ್ಲಿ ಕತ್ತಲೆಯಲ್ಲೇ ಕುಳಿತು ಜೀವನ ನಡೆಸಬೇಕಾಗಿ ಬಂದಿದ್ದು, ಕೊನೆಗೆ ಸಾಮಾಜಿಕ ಕಾರ್ಯಕರ್ತನ ನೇತೃತ್ವದಲ್ಲಿ ಕುಟುಂಬ ಕೆಎಸ್ಇಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗಿ ಬಂತು. ಪ್ರತಿಭಟನೆಗೆ ಸ್ಪಂಧಿಸಿದ ಕೆಎಸ್ಇಬಿ ನೌಕರರು ಕೊನೆಗೂ ತಲುಪಿ ವಿದ್ಯುತ್ ಸಂಪರ್ಕ ಪುನರ್ಸ್ಥಾಪಿಸಿದರು.
ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಅರಮನ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಸುಜಾತ ಎಂಬವರ ಮನೆಯಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಮೊಟಕುಗೊಂಡಿತ್ತು. ಮೊದಲ ದಿನವೇ ಬದಿಯಡ್ಕ ಕೆಎಸ್ಇಬಿ ಸೆಕ್ಷನ್ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತೀವ್ರ ಮಳೆಯ ಹಿನ್ನೆಲೆಯಲ್ಲಿ ಎಲ್ಲಾ ಭಾಗದಲ್ಲೂ ವಿದ್ಯುತ್ ಸಂಪರ್ಕ ನಷ್ಟಗೊಂಡಿತ್ತು. ಇದರಿಂದ ಫೋನ್ ಕರೆ ಮಾಡಿ, ನೇರವಾಗಿ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಿದರೂ ಸುಜಾತರ ಮನೆಗಿರುವ ವಿದ್ಯುತ್ ಮರುಸ್ಥಾಪಿ ಸಿರಲಿಲ್ಲ. ಇದರಿಂದ ಸಂಕಷ್ಟಕ್ಕೀಡಾದ ಕುಟುಂಬ ಈ ಬಗ್ಗೆ ವ ಸಿಪಿಎಂ ನೀರ್ಚಾಲು ಲೋಕಲ್ ಸೆಕ್ರೆಟರಿ ಸುಬೈರ್ರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸುಬೈರ್ರ ನೇತೃತ್ವದಲ್ಲಿ ಸುಜಾತ ಹಾಗೂ ಅವರ ಪತಿ ಅಜಯ್ ಕುಮಾರ್ ನಿನ್ನೆ ಬೆಳಿಗ್ಗೆಯಿಂದಲೇ ಕೆಎಸ್ಇಬಿ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದರು. ಇದರಿಂದ ಮಧ್ಯಾಹ್ನ ವೇಳೆ ವಿದ್ಯುತ್ ದುರಸ್ಥಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ವಿದ್ಯುತ್ ಸಂಪರ್ಕ ಮರು ಸ್ಥಾಪಿಸುವ ವರೆಗೆ ಧರಣಿ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು. ಪ್ರತಿಭಟನೆಗೆ ಸ್ಪಂದಿಸಿದ ಕೆಎಸ್ಇಬಿ ಅಧಿಕಾರಿಗಳು ತಕ್ಷಣ ತಲುಪಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದರು.