ತೋಡಿನಲ್ಲಿ ಸ್ನಾನ ಮಾಡಿದ ಮೂರೂವರೆ ವರ್ಷದ ಮಗುವಿಗೆ ರೋಗ ಸೋಂಕು
ಕಣ್ಣೂರು: ಕಣ್ಣೂರಿನಲ್ಲಿ ಮತ್ತೆ ಅಮೀಬಿಕ್ ಮೆದುಳು ಜ್ವರ ದೃಢೀಕರಿಸಲಾಗಿದೆ. ಪರಿಯಾರಂ ತಿರುವಟ್ಟೂರು ನಿವಾಸಿಯಾದ ಮೂರೂವರೆ ವರ್ಷ ಪ್ರಾಯದ ಗಂಡು ಮಗುವಿಗೆ ಈ ರೋಗ ಬಾಧಿಸಿದೆ. ಜ್ವರ ಬಾಧಿಸಿದ ಮಗುವನ್ನು ಮೊನ್ನೆ ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಪಾಸಣೆಯಲ್ಲಿ ಮಗುವಿಗೆ ಅಮೀಬಿಕ್ ಮೆದುಳು ಜ್ವರ ಬಾಧಿಸಿರುವುದು ತಿಳಿದು ಬಂದಿದೆ. ತಜ್ಞ ಚಿಕಿತ್ಸೆಗಾಗಿ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಸ್ಥಳಾಂತರಿಸಲಾಗಿದೆ. ಕೆಲವು ದಿನಗಳ ಹಿಂದೆ ಈ ಮಗುವನ್ನು ಸಮೀಪದ ತೋಡಿನಲ್ಲಿ ಸ್ನಾನ ಮಾಡಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಜ್ವರ, ತಲೆನೋವು, ವಾಂತಿ ಎಂಬಿವು ಕಂಡು ಬಂದ ಹಿನ್ನೆಲೆಯಲ್ಲಿ ಮಗುವನ್ನು ಮೊನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೀಬಿಕ್ ಮೆದುಳು ಜ್ವರ ಅತ್ಯಪೂರ್ವವಾದ ರೋಗವಾಗಿದೆ ಎಂದು ವೈದ್ಯರುಗಳು ತಿಳಿಸುತ್ತಿದ್ದಾರೆ.