ವಿವಿಧ ಕಡೆಗಳಲ್ಲಿ ಮುಸ್ಲಿಂ ಬಾಂಧವರಿಂದ ಈದುಲ್ ಫಿತ್ರ್ ಆಚರಣೆ

ಮಂಜೇಶ್ವರ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ತೂಮಿನಾಡು, ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ, ಕಾಸರಗೋಡು ಸಹಿತ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಜು ನೆರವೇರಿಸಲಾಯಿತು. ಅರ್ಹರಿಗೆ ಫಿತ್ರ್ ಝಕಾತ್ ನೀಡಿ ಹೊಸಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕುಂಜತ್ತೂರು ಮಸ್ಜೀದಿನ್ನೂರು ಮಸೀದಿಯಲ್ಲಿ ಉಸ್ತಾದ್ ಸಮೀರ್ ಅನ್ಸಾರಿ, ದಾರುಸ್ಸಲಾಂ ಸಲಫಿ ಮಸೀದಿ ಈದ್ಗದಲ್ಲಿ ಮುಹಮ್ಮದಲಿ ಸಲಫಿ ನಮಾಜಿಗೆ ನೇತೃತ್ವ ನೀಡಿದರು. ಅದೇ ರೀತಿ ಉದ್ಯಾವರ ಸಾವಿರ ಜಮಾಯತ್, ಈದ್ಗ ಕಡಂಬಾರ್ ಪೊಸೋಟು ಜುಮಾ ಮಸೀದಿ, ತೂಮಿನಾಡು ಅಲ್‌ಪತಾಃ ಜುಮಾ ಮಸೀದಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಮಾಜು, ಖುತ್ಬ ನಡೆಯಿತು.

ಕಾಸರಗೋಡು ಪ್ರೆಸ್ ಕ್ಲಬ್ ಮೈದಾನದಲ್ಲಿ ನಡೆದ ಈದ್ಗಾಹ್ ನಮಾಜಿಗೆ ಖತೀಬ್ ಚುಯಲಿ ಅಬ್ದುಲ್ಲ ಮೌಲವಿ ನೇತೃತ್ವ ನೀಡಿದರು. ಸಮಾಜವನ್ನು ನಾಶಪಡಿಸುತ್ತಿರುವ ಮಾದಕ ಪದಾರ್ಥ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು. ಬಷೀರ್ ಕೊಲ್ಲಂಪಾಡಿ ಮಾದಕ ವಿರುದ್ಧ ಪ್ರತಿಜ್ಞೆ ಬೋಧಿಸಿದರು.

You cannot copy contents of this page