ಬದಿಯಡ್ಕ: ಬದಿಯಡ್ಕ ಮೇಲಿನ ಪೇಟೆಯ ಹೃದಯ ಭಾಗದಲ್ಲಿರುವ ಖಾಸಗಿ ವ್ಯಕ್ತಿಯ ಕಟ್ಟಡದಿಂದ ತ್ಯಾಜ್ಯ ನೀರನ್ನು ಸಾರ್ವಜನಿಕ ಸ್ಥಳದಲ್ಲಿ ಹರಿಯಬಿಡುತ್ತಿರುವುದಾಗಿ ದೂರಲಾಗಿದೆ.ಈ ಬಗ್ಗೆ ಸ್ಥಳೀಯರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಕಾಸರಗೋಡು ಜೆಡಿ ಆಫೀಸ್ನ (ಐವಿಒ) ಇಂಟೆಲಿಜೆನ್ಸ್ ವಿಭಾಗ, ಪಂಚಾಯತ್, ಬದಿಯಡ್ಕ ಸಿಎಚ್ಸಿಯ ಆರೋಗ್ಯ ವಿಭಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಅದರ ಸಮೀಪದಲ್ಲೇ ಇರುವ ಪಂಚಾಯತ್ ಹಾಗೂ ಆರೋಗ್ಯ ಇಲಾಖ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದಾಗಿಯೂ ನಾಗರಿಕರು ಆರೋಪಿಸುತ್ತಿದ್ದಾರೆ.
ಬದಿಯಡ್ಕ ಮೇಲಿನ ಪೇಟೆಯಿಂದ ಅಲ್ಪವೇ ದೂರವುಳ್ಳ ಕಟ್ಟಡದ ತ್ಯಾಜ್ಯ ನೀರನ್ನು ವಾರದಲ್ಲಿ ಎರಡು ಬಾರಿ ರಾತ್ರಿ ಹೊತ್ತಿನಲ್ಲಿ ಪೈಪ್ ಮೂಲಕ ಚೆರ್ಕಳ-ಕಲ್ಲಡ್ಕ ರಸ್ತೆಯ ಸಾರ್ವಜನಿಕ ಸ್ಥಳಕ್ಕೆ ಹರಿದುಬಿಡ ಲಾಗುತ್ತಿದೆ. ಇದರಿಂದ ಅಸಹನೀಯ ದುರ್ನಾತ ಬೀರುತ್ತಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ತ್ಯಾಜ್ಯಮುಕ್ತ ಪಂಚಾಯತ್ಗಿರುವ ಪ್ರಶಸ್ತಿಗಳಿಸಿದ ಪಂಚಾಯತ್ ಈ ಸಮಸ್ಯೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರಲು ಕಾರಣವೇನು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.







